ಉಡುಪಿ, ಏ 06 (DaijiworldNews/DB): ಉಡುಪಿಯ ಹಿಜಾಬ್ ಹೋರಾಟಕ್ಕೆ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಬೆಂಬಲವಿದೆ. ಎಸ್ಡಿಪಿಐ ಮತ್ತು ಸಿಎಫ್ಐ ನೇರವಾಗಿ ಆಲ್ ಖೈದಾ ಜೊತೆ ಸಂಪರ್ಕದಲ್ಲಿದೆ. ಹಿಜಾಬ್ ಹೋರಾಟ ಎನ್ ಐಎ ತನಿಖೆಯಾದರೆ ಎಲ್ಲಾ ಷಡ್ಯಂತ್ರಗಳು ಹೊರ ಬೀಳಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ತನಿಖೆಗೆ ಒಳಪಡಿಸಬೇಕು. ಆರು ವಿದ್ಯಾರ್ಥಿಗಳಿಗೆ ಹಣಕಾಸಿನ ವ್ಯವಸ್ಥೆಯ ಬಗ್ಗೆಯೂ ತನಿಖೆಯಾಗಬೇಕು ಎಂದರು.
ಹಿಜಾಬ್ ಹೋರಾಟಕ್ಕಿಳಿದ ಆರು ಮಂದಿ ವಿದ್ಯಾರ್ಥಿನಿಯರಿಗೆ ಅಲ್ ಖೈದಾ ಲಿಂಕ್ ಇದೆ ಎಂದು ನಾನು ಹೇಳುವುದಿಲ್ಲ. ಆದರೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಭಯೋತ್ಪಾದಕರಿಗೆ ಬೆಂಬಲ ಕೊಡುವ ಸಂಘಟನೆ. ಅವರು ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ ಎಂದವರು ತಿಳಿಸಿದರು.
ಹಿಜಬ್ ಹೋರಾಟಗಾರ್ತಿಯರು ಭಾರತದ ಪ್ರಜೆಗಳು. ಭಾರತದ ಅನ್ನ-ನೀರು ವಿದ್ಯಾಭ್ಯಾಸ ಸವಲತ್ತು ಪಡೆದವರು. ನೀವು ನೈಜ ಭಾರತೀಯರಾರದರೆ ಅಲ್ ಖೈದಾ ಹೇಳಿಕೆಯನ್ನು ಖಂಡಿಸಬೇಕು. ಅಲ್ಲದೆ ಅಲ್ ಖೈದಾ ಬೆಂಬಲ ನಮಗೆ ಬೇಡ ಎಂದು ಸ್ಪಷ್ಟಪಡಿಸಬೇಕು ಎಂದು ರಘುಪತಿ ಭಟ್ ಆಗ್ರಹಿಸಿದರು.
ಹೈಕೋರ್ಟ್ ನ ತೀರ್ಪು ಬಂದ ಕೂಡಲೇ ಆರು ಮಂದಿ ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೀಗ ಅಲ್ ಖೈದಾ ಬೆಂಬಲ ಕೊಟ್ಟ ಬಗ್ಗೆ ಕೂಡಲೇ ಅವರು ಸ್ಪಷ್ಟನೆ ನೀಡಬೇಕು. ಆ ಮೂಲಕ ಅವರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ದೇಶದ್ರೋಹಿ ಚಟುವಟಿಕೆ ಮಾಡುವ ಸಂಘಟನೆಗಳಿಗೆ ಬಹಿಷ್ಕಾರ ಹಾಕಬೇಕು. ದೇಶದ್ರೋಹಿ ಮುಸಲ್ಮಾನರ ಮಾನಸಿಕತೆ ಮೊದಲು ಬದಲಾಗಬೇಕು.
ಅಪರಾಧ ಚಟುವಟಿಕೆ ಮಾಡಿದವರನ್ನು ಸಮುದಾಯ ಬಹಿಷ್ಕರಿಸಬೇಕು ಎಂದರು.
ಉರ್ದು ಮಾತನಾಡಿಲ್ಲ ಎಂದು ಬೆಂಗಳೂರಿನ ಚಂದ್ರುವನ್ನು ಕೊಲೆ ಮಾಡಲಾಯಿತು. ಇದು ದುರದೃಷ್ಟಕರ ಬೆಳವಣಿಗೆ. ಹಿಂದೂ ಮೊಹಲ್ಲಾಗಳಲ್ಲಿ ಇಂತಹ ಕೊಲೆ ಎಂದಿಗೂ ನಡೆಯುವುದಿಲ್ಲ. ಸ್ಥಳೀಯ ನಿವಾಸಿಗಳು ಚಂದ್ರು ರಕ್ಷಣೆಗೆ ಬಂದಿಲ್ಲ. ಸುತ್ತಮುತ್ತ ಇದ್ದವರು ಎಲ್ಲರೂ ಪೈಶಾಚಿಕ ಕೃತ್ಯ ಮೆರೆದಿದ್ದಾರೆ ಎಂದವರು ವಿಷಾದ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಅವರೆಲ್ಲ ಎಲ್ಲಿ ಹೋಗಿದ್ದಾರೆ? ಹಲಾಲ್ ವಿಚಾರದಲ್ಲಿ ಮಾಂಸ ತಿಂದ ಪ್ರಗತಿಪರರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು, ಮುಸ್ಲಿಮರಿಗೆ ಬೆಂಬಲಿಸುವುದು ಸೌಹಾರ್ದತೆ ಎಂಬ ಫ್ಯಾಶನ್ ಭಾರತದಲ್ಲಿ ನಡೆಯುತ್ತಿದೆ. ಹಿಂದುಗಳ ಪರವಾಗಿ ಮಾತನಾಡಿದರೆ ಕೋಮುವಾದ ಎಂದು ನಿರ್ಧಾರವಾಗಿದೆ. ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಬೆಂಗಳೂರು ಘಟನೆ ಬಗ್ಗೆ ಏನು ಹೇಳುತ್ತಾರೆ ಎಂದು ಕಾದು ನೋಡಬೇಕು ಎಂದು ಇದೇ ವೇಳೆ ಅವರು ತಿಳಿಸಿದರು.