ನವದೆಹಲಿ, ಡಿ 25 (MSP): ದೇಶದಲ್ಲಿ ಈಗಿನ ರಾಜಕೀಯ ಪರಿಸ್ಥಿತಿ ಜಟಿಲವಾಗಿದೆ.೨೦೧೯ರ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುವುದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆ ಬಳಿಕ ಯಾರು ಮುಂದಿನ ಪ್ರಧಾನಿಯಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿನ ಮಧುರೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮ್ ದೇವ್, ಮುಂದಿನ ಪ್ರಧಾನಿಯಾಗಿ ಯಾರು ದೇಶವನ್ನು ಮುನ್ನಡೆಸುತ್ತಾರೆ ಎಂಬುದನ್ನು ಅರಿಯಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ತಾವು ಯಾವುದೇ ಪಕ್ಷದ ಪರವಾಗಿ ಅಥವಾ ವ್ಯಕ್ತಿಯ ಪರವಾಗಿ ನಿಂತಿಲ್ಲ ಎಂದು ಸ್ಪಷ್ಟನೆ ನೀಡಿದ ಬಾಬಾ ರಾಮ್ ದೇವ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಪ್ರಸ್ತುತ ತಾವು ರಾಜಕೀಯದ ಕುರಿತು ಆಲೋಚನೆ ಮಾಡುತ್ತಿಲ್ಲ ಎಂದೂ ಹೇಳಿದ್ದಾರೆ. ೫೨ ಹರೆಯ ರಾಮ್ ದೇವ್ ೨೦೧೫ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ವರ್ಷದ ನಂತರ ಹರಿಯಾಣದ ರಾಯಭಾರಿಯನ್ನಾಗಿ ಸಂಪುಟ ಸಚಿವರ ದರ್ಜೆ ನೀಡಲಾಯಿತು.
ಆದರೆ ಇತ್ತೀಚೆಗೆ ರಾಜಕೀಯದಿಂದ ದೂರವಾಗಿರುವಂತೆ ಮಾತನಾಡಿತ್ತಿರುವ ಅವರು ಇಲ್ಲೂ ಕೂಡಾ ‘ರಾಜಕೀಯ ಅಸ್ಥಿರತೆ, ಹೋರಾಟ, ಕಿತ್ತಾಟಗಳು ದೇಶಕ್ಕೆ ಒಳ್ಳೆಯದಲ್ಲ. ನನ್ನ ಉದ್ದೇಶ ಹಿಂದು ದೇಶ ನಿರ್ಮಾಣವಲ್ಲ, ಅಧ್ಯಾತ್ಮಿಕ ದೇಶ ಕಟ್ಟುವುದು. ರಾಜಕೀಯದ ಬಗ್ಗೆ ಆಸಕ್ತಿಯಿಲ್ಲ ಯೋಗ ಮತ್ತು ವೇದಾಭ್ಯಾಸಗಳಿಂದ ನಾವು ಭಾರತವನ್ನು ಆಭಿವೃದ್ದಿಶೀಲ ದೈವಿಕ ಮತ್ತು ಆಧ್ಯಾತ್ಮ ದೇಶವನ್ನಾಗಿ ಮಾಡುತ್ತೇವೆ ’ ಎಂದು ಹೇಳಿದ್ದಾರೆ.