ಮಂಗಳೂರು,ಡಿ 26 (MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುಣ್ಯ ಕ್ಷೇತ್ರಗಳಲ್ಲಿ ಶ್ರೀಶಕ್ತಿಪೀಠವಾಗಿರುವ ಕಟೀಲು ಪ್ರಮುಖವಾದ ಪುಣ್ಯಕ್ಷೇತ್ರ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ನದಿಯ ಮಧ್ಯ ಭಾಗದಲ್ಲಿರುವುದು ಈ ಕ್ಷೇತ್ರದ ವಿಶೇಷತೆ. ವಿದ್ಯಾದಾನ, ಪ್ರಾಕೃತಿಕ ಸಿರಿ ಮತ್ತು ಯಕ್ಷಗಾನ ಕಲೆಗಳಿಗೆ ಹೆಸರುವಾಸಿಯಾದ ಕಟೀಲು ಕ್ಷೇತ್ರದ ಜೀರ್ಣೋದ್ಧಾರದ ಕಾಮಗಾರಿ ಕೆಲಸದ ಅಂಗವಾಗಿ ಡಿ.26 ರ ಬುಧವಾರ 60 ವರ್ಷಗಳ ಹಿಂದೆ ಪ್ರತಿಷ್ಟಾಪಿಸಲಾಗಿದ್ದ ಧ್ವಜಸ್ತಂಭವನ್ನು ತೆರವುಗೊಳಿಸಲಾಗುತ್ತಿದ್ದು, 2019ರ ಜ 25ರಂದು ತೈಲಾಭಾಂಡದಲ್ಲಿಡಲಾಗಿದ್ದ ನೂತನ ಮರದ ಧ್ವಜಸ್ತಂಭವನ್ನು ಪ್ರತಿಷ್ಠಾಪಿಸಲಾಗುವುದು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸನ್ನಿಧಿ ಯಲ್ಲಿ2019ರ ಜ.25 ರಂದು ನವೀಕೃತ ದೇಗುಲದಲ್ಲಿ ಅಷ್ಟಬಂಧ ಪ್ರತಿಷ್ಠೆ ನಡೆಯಲಿದೆ. ಇನ್ನು ನೂತನ ಧ್ವಜಸ್ತಂಭವನ್ನು ಕೊಡೆತ್ತೂರು ಮಾಗಂದಡಿ ಮನೆತನದವರು ಸೇವಾರೂಪದಲ್ಲಿ ಸಮರ್ಪಿಸುತ್ತಿದ್ದು,2013ರಲ್ಲಿ ಮರ ಸಿದ್ಧಪಡಿಸುವಲ್ಲಿಂದ ಪ್ರತಿಷ್ಠೆಯವರೆಗೂ ಮಾಗಂದಡಿ ಮನೆತನದ ಸೇವಾ ಸಮರ್ಪಣೆ ನಡೆಯಲಿದೆ. ಈ ಹಿಂದಿನ ಧ್ವಜಸ್ತಂಭವನ್ನೂ ಕೊಡೆತ್ತೂರು ಮಾಗಂದಡಿಯ ಮನೆತನದವರೇ ನೀಡಿದ್ದರು ಎನ್ನಲಾಗಿದೆ.
2020ರ ಜನವರಿಯಲ್ಲಿ ಕ್ಶೇತ್ರದ ಬ್ರಹ್ಮಕಲಶೋತ್ಸವ ಜರುಗಲಿದ್ದು ಅದಕ್ಕೂ ಪೂರ್ವಭಾವಿಯಾಗಿ ಧ್ವಜಸ್ತಂಭದ ತಾಮ್ರದ ಹೊದಿಕೆ, ಬೆಳ್ಳಿಯ ಕವಚ ಅಳವಡಿಸಿ ಚಿನ್ನದ ಲ್ಯಾಮಿನೇಶನ್ ಅಳವಡಿಸಿ ಸಿದ್ಧಗೊಳಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದೆ.
ಇದಲ್ಲದೆ ದೇವಾಲಯದ ಒಳಾಂಗಣದಲ್ಲಿದ್ದ ಬೃಹತ್ ಸುತ್ತಳತೆ ಗಾತ್ರದ ಆರು ಸ್ಥಂಭಗಳನ್ನು ಉನ್ನತ ತಂತ್ರಜ್ಞಾನ ಬಳಸಿ ಈಗಾಗಲೇ ತೆರವುಗೊಳಿಸಲಾಗಿದೆ. ಕಟೀಲು ನದಿ ಮಧ್ಯೆ ಇರುವ ದ್ವೀಪ ದೇಗುಲವಾದ ಕಾರಣ ಉಳಿದೆಡೆಗಳಿಂದ ಇಲ್ಲಿನ ಯೋಜನೆಗಳ ರೂಪುರೇಷೆ ವಿಭಿನ್ನವಾಗಿರುತ್ತದೆ,