ಉಪ್ಪಿನಂಗಡಿ, ಏ 06 (DaijiworldNews/DB): ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅನ್ಯಕೋಮಿನ ಜೋಡಿಯನ್ನು ತಡೆದು ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಡಬ ಸಿರಿಬಾಗಿಲು ಗ್ರಾಮದ ಬಾಲಚಂದ್ರ ( 35), ರಂಜಿತ್ (31) ಮತ್ತು ತೀರ್ಥಪ್ರಸಾದ್ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ.
ಪುತ್ತೂರಿನ ನಝೀರ್ ಎಂಬಾತನು ತಾನು ಪ್ರೀತಿಸುತ್ತಿರುವ ಇನ್ನೊಂದು ಕೋಮಿನ ಯುವತಿ ಪೂಜಾಳನ್ನು ತನ್ನ ಅಟೋರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಗುಂಡ್ಯಕ್ಕೆ ಬಂದಿದ್ದ. ಬಳಿಕ ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುವಾಗ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಮೂವರು ಆರೋಪಿಗಳು ಸೇರಿದಂತೆ ಇತರರು ರಿಕ್ಷಾವನ್ನು ತಡೆದು ನಿಲ್ಲಿಸಿದ್ದಾರೆ.
ಬಳಿಕ ನೀವು ಎಲ್ಲಿಗೆ ಹೇಗುತ್ತಿದ್ದೀರಿ, ನಿಮ್ಮ ಹೆಸರೇನು ಎಂದು ಪ್ರಶ್ನಿಸಿದ್ದಾರೆ. ಜೋಡಿ ತಮ್ಮ ಹೆಸರನ್ನು ಈ ವೇಳೆ ಹೇಳಿದ್ದು, ಯುವಕನಿಗೆ ನಿನಗೆ ತಿರುಗಾಡಲು ಹಿಂದೂ ಹುಡುಗಿಯೇ ಆಗಬೇಕಾ ಎಂದು ಪ್ರಶ್ನಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ಮುಖ, ತಲೆಗೆ ಕೈಯಿಂದ ಯದ್ವಾತದ್ವ ಹೊಡೆದಿರುವುದಾಗಿ ನಝೀರ್ ದೂರು ದಾಖಲಿಸಿದ್ದಾನೆ. ಅಲ್ಲದೆ, ರಸ್ತೆ ಬದಿಯ ಪೊದೆಯಿಂದ ಬೆತ್ತ ತಂದು ಕಾಲು, ಬೆನ್ನು, ಕೈಗೆ ಹಲ್ಲೆ ನಡೆಸಿದ್ದಲ್ಲದೆ, ಇನ್ನು ಮುಂದೆ ಹಿಂದೂ ಹುಡುಗಿಯನ್ನು ಸುತ್ತಾಡಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಪೂಜಾ ಅವರಿಗೂ ಬೈದಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.