ಉಡುಪಿ, ಏ 06 (DaijiworldNews/DB): ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರು ಅಂಗಾಂಗ ದಾನದಿಂದ 6 ಮಂದಿಯ ಜೀವಕ್ಕೆ ಬೆಳಕಾಗಿದ್ದಾರೆ.
ಬ್ರಹ್ಮಾವರದ ಉಪ್ಪಿನಕೋಟೆ ಬಳಿ ಎ. 2ರಂದು ಸಂಜೆ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಸಾಲಿಗ್ರಾಮದ ಶ್ರೀನಿವಾಸ (19) ಎಂಬವರು ತೀವ್ರ ಗಾಯಗೊಂಡು ಬಳಿಕ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮೃತ ಯುವಕನ ಹೆತ್ತವರು ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದರೂ, ಅಂಗಾಂಗ ಅಪೇಕ್ಷಿತರ ಬಾಳಿಗೆ ಬೆಳಕಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮೃತ ಯುವಕನ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ದಾನ ಮಾಡಲಾಗಿದೆ. ಅಂಗಾಂಗಕ್ಕಾಗಿ ನೋಂದಾಯಿಸಿದ 6 ಮಂದಿಗೆ ಶ್ರೀನಿವಾಸ್ ಅಂಗಾಂಗಗಳನ್ನು ಅಳವಡಿಸಲಾಗಿದೆ. ಎರಡು ಕಾರ್ನಿಯಾಗಳು ಮತ್ತು ಎರಡು ಮೂತ್ರಪಿಂಡ ಹಾಗೂ ಚರ್ಮವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಳಸಲಾಯಿತು. ಯಕೃತ್ತನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಮೃತಪಟ್ಟರೆ ಅಂಗದಾನ ಮಾಡಿ
ಯುವಕನ ಅಂಗಾಂಗ ದಾನ ಮಾಡಲು ನಟ ದಿ. ಪುನಿತ್ ರಾಜ್ ಕುಮಾರ್ ಅವರು ಪ್ರೇರಣೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಪುನಿತ್ರಾಜ್ ಕುಮಾರ್ ಮೃತಪಟ್ಟ ಸಂದರ್ಭದಲ್ಲಿ ನೇತ್ರದಾನ ನಡೆದಾಗ ಅದರಿಂದ ಪ್ರೇರಿತರಾದ ಶ್ರೀನಿವಾಸ ತಾನು ಆಕಸ್ಮಿಕವಾಗಿ ಮೃತಪಟ್ಟರೆ ಅಂಗಾಂಗ ದಾನ ಮಾಡಿ ಎಂದು ತಮಾಷೆಯಾಗಿ ಹೇಳಿದ್ದರಂತೆ. ಇದೀಗ ಅಪಘಾತದಲ್ಲಿ ಆತನ ಮೆದುಳು ನಿಷ್ಕ್ರಯಗೊಂಡ ಹಿನ್ನೆಲೆಯಲ್ಲಿಅವರ ಇಚ್ಚೆಯಂತೆ
ಅಂಗಾಂಗ ದಾನ ಮಾಡಲಾಗಿದೆ.
ನೋವಿನಲ್ಲೂ ಸಾಮಾಜಿಕ ಕಳಕಳಿ ಮೆರೆದ ಬಡ ಕುಟುಂಬದ ನಿರ್ಧಾರಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.