Karavali
ಮಂಗಳೂರು: ಚುನಾವಣೆ ಹತ್ತಿರವಾದಾಗ ಹೊಸ ತಂತ್ರ: ಜನರಿಗೆ ಬೇಕಿರುವುದು ಸಂಘರ್ಷವಲ್ಲ ಅಭಿವೃದ್ಧಿ ಮಂತ್ರ
- Tue, Apr 05 2022 11:37:10 PM
-
SANTHOSH M
ಮಂಗಳೂರು, ಏ. 05 (DaijiworldNews/SM): ಕರಾವಳಿಯ ಕಾಲೇಜೊಂದರಲ್ಲಿ ಆರಂಭಗೊಂಡ ಆಂತರಿಕವಾಗಿಯೇ ಪರಿಹರಿಸಿಕೊಳ್ಳಬಹುದಾದ ವಿಚಾರವೊಂದು ಇಂದು ರಾಜ್ಯದೆಲ್ಲೆಡೆ ಅಶಾಂತಿ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. ಹಿಜಾಬ್ ನಿಂದ ಆರಂಭಗೊಂಡ ವಿವಾದ ಬೇರೆ ಬೇರೆ ಸ್ವರೂಪ ಪಡೆದುಕೊಂಡು ಇದೀಗ ವ್ಯಾಪಾರ, ತಿನ್ನುವ ಆಹಾರ, ಆಜಾನ್ ಪ್ರಾರ್ಥನೆ ಸೇರಿದಂತೆ ವಿವಿಧ ಸ್ವರೂಪ ಪಡೆದುಕೊಂಡಿದೆ.
ಸಂಘಟನೆಗಳು, ರಾಜಕೀಯ ಪಕ್ಷಗಳು ಸನ್ನಿವೇಶವನ್ನು ಹತೋಟಿಗೆ ತರುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ, ಪರಸ್ಪರ ಆರೋಪ ಪ್ರತ್ಯಾರೋಪಗಳ ಮೂಲಕ ಉರಿಯುವ ಜ್ವಾಲೆಗೆ ತುಪ್ಪ ಸುರಿಯುವ ಕೆಲಸವಾಗುತ್ತಿದೆ. ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾರೂ ಕೂಡ ಮುಂದಾಗಿಲ್ಲ. ಇಂತಹ ಸೂಕ್ಷ್ಮ ವಿಚಾರಗಳನ್ನು ಪಕ್ಷಬೇಧ ಮರೆತು, ಧರ್ಮದ ಕಟ್ಟಲೆಗಳನ್ನು ಮೀರಿ ಶಾಂತಿ ಮಾತುಕತೆ ನಡೆಸುವುದು ಸದ್ಯ ಅತೀ ಅವಶ್ಯಕವಾಗಿದೆ.
ಹಿಜಾಬ್ ಮೂಲಕ ಬೆಂಕಿ ಹಚ್ಚಿದ ನಾಯಕರು:
ಉಡುಪಿ ಜಿಲ್ಲೆಯ ಸರಕಾರಿ ಪಿಯು ಕಾಲೇಜಿನಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಹಿಜಾಬ್ ವಿವಾದ ಸಣ್ಣದಾಗಿ ಶುರುವಾಗಿತ್ತು. ಜಿಲ್ಲಾ ಮಟ್ಟದ ನಾಯಕರು ಮುಖಂಡರು ಕುಳಿತು ಸೌಹಾರ್ದಯುತವಾಗಿ ಬಗೆಹರಿಸಬಹುದಾದ ವಿಚಾರವೂ ಆಗಿತ್ತು. ಆದರೆ, ಅದಕ್ಕೆ ಯಾವುದೇ ಮುಖಂಡರು ಗಮನ ಹರಿಸಲೇ ಇಲ್ಲ. ಒಂದೊಮ್ಮೆ ಸೋ ಕಾಲ್ಡ್ ನಾಯಕರು ಮುಖಂಡರು ಬೆಂಕಿಗೆ ತುಪ್ಪ ಸುರಿಯುವ ಬದಲು ಸೌಹಾರ್ದಯುತವಾಗಿ ಬಗೆ ಹರಿಸಿದ್ದೇ ಆಗಿದ್ದಲ್ಲಿ ಇಂದು ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಉಡುಪಿಯಿಂದ ಆರಂಭಗೊಂಡ ವಿವಾದ ಬಳಿಕ ಕುಂದಾಪುರದತ್ತ ಮುಖ ಮಾಡಿ ಅಂತಿಮವಾಗಿ ರಾಜ್ಯದೆಲ್ಲಡೆ ಕಾಡ್ಗಿಚ್ಚಿನಂತೆ ಹರಡಿರುವುದು ಇತಿಹಾಸವಾದರೂ, ಜೀವಂತವಾಗಿರುವ ಸತ್ಯ.
ರಾಜಕೀಯ ನಾಯಕರಿಗೆ ಬೇಕಿರುವುದೇ ಘರ್ಷಣೆ?
ಧಾರ್ಮಿಕ ವಿಚಾರಗಳಿಗೆ ಯಾವುದೇ ಪಕ್ಷದವರಾಗಲಿ ಪ್ರವೇಶಿಸಿದ ಸಂದರ್ಭದಲ್ಲಿ ಮತ್ತೊಂದು ಪಕ್ಷ ಅದರ ವಿರುದ್ಧವಾಗಿ ನಿಲ್ಲುವುದು ಜಾಯಮಾನ. ಪರ ವಿರೋಧ ಹೇಳಿಕೆಗಳನ್ನು ನೀಡುವುದು ತಲೆತಲಾಂತರದಿಂದ ಬಂದಿರುವ ಪದ್ಧತಿ ಎಂಬಂತಾಗಿದೆ. ಆದರೆ, ಸೂಕ್ಷ್ಮ ವಿಚಾರಗಳನ್ನು ಅನಗತ್ಯ ಗೊಂದಲಗಳಾಗುವ ರೀತಿಯಲ್ಲಿ ಬಿಂಬಿಸಲು ಯಾವುದೇ ನಾಯಕನೂ ಕೂಡ ಮುಂದಾಗಬಾರದು. ಯಾವುದೇ ಮುಖಂಡರೂ ಕೂಡ ಇದಕ್ಕೆ ಪ್ರೇರೇಪಿಸಬಾರದು. ವೈವಿದ್ಯತೆಯಿಂದ ಕೂಡಿರುವ ನಮ್ಮ ರಾಷ್ಟ್ರದಲ್ಲಿ ಏಕಾತೆಯ ಮಂತ್ರವನ್ನು ಸಾರುವ ಕಾಯಕವಾಗಬೇಕು. ಹೊರತಾಗಿ ವಿವಾದ ಹುಟ್ಟಿಕೊಂಡ ಸಂದರ್ಭದಲ್ಲಿ ಅವುಗಳಿಗೆ ಪರ ವಿರೋಧ ಹೇಳಿಕೆಗಳನ್ನು ನೀಡಿ ಜನರನ್ನು ಕೆರಳಿಸುವುದು, ಆ ಮೂಲಕ ಚುನಾವಣೆಗೆ ತಯಾರಿ ನಡೆಸುವುದು ಎಷ್ಟು ಸರಿ? ನಮ್ಮ ನಾಯಕರೆಣಿಸಿಕೊಂಡವರು ಪರಸ್ಪರ ಕಿತ್ತಾಟ, ಕಚ್ಚಾಟಗಳಲ್ಲೇ ದಿನ ದೂಡುತ್ತಿದ್ದು, ಗಂಡೆದೆಯಿಂದ ವಿವಾದ ಬಗೆ ಹರಿಸಿ ಶಾಂತಿ ನೆಲೆಸಲು ಮಾತುಕತೆಯ ಹಾದಿ ಹುಡುಕವ ನಾಯಕರೇ ಇಲ್ಲವಾದಂತಾಗಿದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಇವರಿಗೆ ಬೇಕಾಗಿರುವುದೇ ವಿವಾದ ಎಂಬಂತೆ ತೋರುತ್ತಿದೆ. ಸದ್ಯ ಹುಟ್ಟಿಕೊಂಡ ಎಲ್ಲಾ ವಿವಾದಗಳಲ್ಲೂ ನಮ್ಮ ನಾಯಕರೆಲ್ಲರ ಧೋರಣೆ ಇದೇ ಆಗಿದೆ. ಕೆಲವರು ಕೆಲವು ಧರ್ಮದ ಓಲೈಕೆ ನಡೆಸಿದರೆ, ಮತ್ತೆ ಕೆಲವರು ಮತ್ತೊಂದು ವರ್ಗವನ್ನು ಸಂತುಷ್ಠಿಗೊಳಿಸುವ ಕಾರ್ಯ ಮಾಡುತ್ತಾರೆ. ಮುಖಂಡರು, ನಾಯಕರ ಹೇಳಿಕೆಗಳು ಜನರ ಮನದಾಳವನ್ನು ಸೇರಿ ಮತ್ತೊಂದು ರೀತಿಯ ಸ್ಪೋಟಕ್ಕೆ ಕಾರಣವಾಗುತ್ತದೆ. ಅನುಭವಿಗಳು ಎಂದುಕೊಂಡಿರುವ ನಮ್ಮ ನಾಯಕರು ಇಂತಹ ವಿಚಾರಗಳನ್ನು ಹೆಚ್ಚು ವಿವಾದವಾಗದೆ ಎರಡೂ ವರ್ಗದವರನ್ನು ಶಾಂತಿಯುತವಾಗಿ ಬಗೆಹರಿಸಲು ಮುಂದಾಗಬೇಕು. ಮೂರನೇ ವ್ಯಕ್ತಿ ಅರ್ಥಾತ್, ಮತ್ತೊಂದು ಪ್ರಾದೇಶಿಕ ಪಕ್ಷ ಅಥವಾ ಸಂಘಟನೆ ವಿಷ ಬೀಜ ಬಿತ್ತಲು ಮುಂದಾದಲ್ಲಿ ಹೆಡೆಮುರಿ ಕಟ್ಟುಲು ಹಿಂದೆ ಮುಂದೆ ನೋಡಬಾರದು. ಕಾನೂನ ಪ್ರಕಾರವೇ ಸೂಕ್ತ ನಿರ್ಧಾರಕ್ಕೆ ಸರಕಾರ ಬರಬೇಕು.
ಎತ್ತನಿಂದೆತ್ತ ಸಂಬಂಧ!
ರಾಜ್ಯದಲ್ಲಿ ಆರಂಭದಲ್ಲಿ ಹಿಜಾಬ್ ನಿಂದ ಆರಂಭಗೊಂಡ ಈ ವಿವಾದ ಬಳಿಕ ಬೇರೆ ಬೇರೆ ಸ್ವರೂಪ ಪಡೆದಿರುವುದು ನಮ್ಮ ಕಣ್ಣಮುಂದೇ ಇದೆ. ಹಿಜಾಬ್ ಬಗೆಹರಿಯದ ಸಮಸ್ಯೆ ಎಂದಾಗ ಸರಕಾರ ಮಧ್ಯೆ ಪ್ರವೇಶಿಸಿದಾದರೂ ಯಾವುದೇ ಫಲ ಸಿಗದಾಗ ನ್ಯಾಯಾಂಗ ವ್ಯವಸ್ಥೆಯೇ ಇದಕ್ಕೊಂದು ಅಂತ್ಯ ಹಾಡಬೇಕಾಗಿತ್ತು. ಅದರಂತೆ ಕೋರ್ಟ್ ಮಧ್ಯೆ ಪ್ರವೇಶಿಸಿ ಸುದೀರ್ಘ ವಿಚಾರಣೆ ಬಳಿಕ ತನ್ನ ಆದೇಶ ನೀಡಿದೆ. ಆದರೆ, ಆದೇಶದಿಂದ ಸಂತುಷ್ಟರಾಗದವರು, ಬಂದ್ ನಡೆಸಿದರು. ಇದು ಮತ್ತೊಂದು ವರ್ಗವನ್ನು ಕೆರಳಿಸಿತ್ತು. ಮತ್ತೊಂದು ವರ್ಗ ಇದಕ್ಕೆ ಪ್ರತಿಕಾರ ತೀರಿಸಲು ಮುಂದಾಗಿ ದೇವಸ್ಥಾನ ವಠಾರದಲ್ಲಿ ವ್ಯಾಪಾರ ನಿರ್ಬಂಧಕ್ಕೆ ಮುಂದಾದರು. ಬಳಿಕ ಅನ್ನದಲ್ಲೂ ಕಲ್ಲು ಹುಡುಕಿದರು. ಹಲಾಲ್ ಬಳಸುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದರು. ಆ ಬಳಿಕ ಆಜಾನ್ ಪ್ರಾರ್ಥನೆಗೂ ಬ್ರೇಕ್ ಹಾಕಬೇಕು ಅಥವಾ ಕೋರ್ಟ್ ಆದೇಶ ಪಾಲಿಸಬೇಕೆನ್ನುವ ಪಟ್ಟು ಜೋರಾಯಿತು. ಇದಕ್ಕೆ ಪರ್ಯಾಯವಾಗಿ ಸಂಘಟನೆಗಳು ದೇವಸ್ಥಾನಗಳಲ್ಲಿ ಮುಂಜಾನೆ ಭಜನೆಗೆ ಮುಂದಾದರು. ಹಣ್ಣು ಖರೀದಿ ಸೇರಿದಂತೆ ಅನೇಕ ವಿಚಾರಗಳೇ ಈ ವಿವಾದದ ಸುಳಿಯೊಳಗೆ ಸಿಲುಕೊಂಡಿದ್ದರೂ ನೀರು ಹಾಯಿಸಿ ನಂದಿಸುವ ಮಟ್ಟಿಗೆ ಯಾವೊಬ್ಬನೂ ಕೂಡ ಮುಂದಾಗಿಲ್ಲದಿರುವುದು ವಿಷಾಧನೀಯ.
ಬುಡದಿಂದಲೇ ಕೀಳದಿರುವುದೇ ಸಮಸ್ಯೆಗೆ ಕಾರಣ:
ಹಿಜಾಬ್ ವಿವಾದ ಆರಂಭವಾದಾಗಲೇ ಅಂತ್ಯ ಹಾಡಬೇಕಾಗಿತ್ತು. ರಾಜ್ಯದ ತುಂಬಾ ಹರಡುವುದಕ್ಕೆ ವೇದಿಕೆ ಕಲ್ಪಿಸಬಾರದಿತ್ತು. ವಿದ್ಯಾರ್ಥಿಗಳನ್ನು ಮನವರಿಕೆ ಮಾಡುವ ನಿಟ್ಟಿನಲ್ಲೇ ಎಲ್ಲರು ಪ್ರಯತ್ನಿಸಬೇಕಿತ್ತೇ ಹೊರತು ವಿವಾದಕ್ಕಲ್ಲ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆಯೂ ಇಲ್ಲಿ ಆಗಿಲ್ಲ. ಎಲ್ಲೆಡೆ ವಿವಾದ ಘರ್ಷಣೆಯ ಬಳಿಕವೂ ಯಾರೂ ಕೂಡ ಶಾಂತಿ ಮಾತುಕತೆ ನಡೆಸುತ್ತಿಲ್ಲ. ಬ್ರೇಕ್ ಹಾಕುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ. ಆರಂಭದಲ್ಲೇ ಪರಿಹಾರ ಕಂಡುಕೊಂಡಿದ್ದರೆ, ಇಂದು ಇಂತಹ ಗೊಂದಲಗಳಿಗೆ ಅವಕಾಶವಿರುತ್ತಿರಲಿಲ್ಲ.
ರಾಜ್ಯಕ್ಕೆ ಬೇಕಿರುವುದು ಅಭಿವೃದ್ಧಿ, ಪುಕ್ಕಟೆ ಚುನಾವಣಾ ಪ್ರಚಾರದ ಘರ್ಷಣೆಯಲ್ಲಿ!
ಇಂದು ರಾಜ್ಯದಲ್ಲಿ ಅದೆಷ್ಟೋ ಸಮಸ್ಯೆಗಳಿಂದ ಜನ ಬೆಂದು ಹೋಗಿದ್ದಾರೆ. ಆದರೆ, ಜನರ ಸಂಕಷ್ಟ ಆಲಿಸುವವರೇ ಇಲ್ಲ. ಬೆಳಗಾಗುವಾಗ ಆರಂಭವಾದ ಸಂಘರ್ಷದ ಸುದ್ದಿಗಳು ರಾತ್ರಿ ಮಲಗುವ ತನಕವೂ ನಿದ್ದೆಗೆಡಿಸುವುದಲ್ಲದೆ, ಮತ್ತೇನು ಪ್ರಯೋಜನಕ್ಕಿಲ್ಲ. ದಿನದಿಂದ ದಿನಕ್ಕೆ ಬೆಲೆ ಏರಿಕೆ, ನಿತ್ಯ ಬಳಕೆಯ ವಸ್ತುಗಳ ದರ ಹೆಚ್ಚಳ ಸೇರಿದಂತೆ ಇತರ ಅನೇಕ ನೈಜ ಸಮಸ್ಯೆಗಳು ರಾಜ್ಯದ ಜನರನ್ನು ಇನ್ನಿಲ್ಲದೆ ಕಾಡುತ್ತಿವೆ. ಆದರೆ, ಅತ್ತ ಯಾವೊಬ್ಬ ನಾಯಕನೂ ಗಮನಹರಿಸುತ್ತಿಲ್ಲ. ರಾಜ್ಯದಲ್ಲಿ ಸಂಘಟನೆ, ರಾಜಕೀಯ ಪಕ್ಷಗಳಿಗೆ ಸೇರಿದ ವ್ಯಕ್ತಿಗಳಿಗಷ್ಟೇ ಗೌರವ. ಅವರು ಸತ್ತರೆ, ಅಥವಾ ಕೊಲ್ಲಲ್ಪಟ್ಟರೆ ಮಾತ್ರ ಪರಿಹಾರ. ಆದರೆ, ಅದೆಷ್ಟೋ ಅಮಾಯಕರು ಸಾಯುತ್ತಿದ್ದರೆ. ಅನಾರೋಗ್ಯದಿಂದ ಮರಣ ಹೊಂದುತ್ತಿದ್ದಾರೆ. ಅವರ ಕಣ್ಣಿರಿಗೆ ಅಂಗೈ ನೀಡುವುದು ಬಿಡಿ, ಕಣ್ಣಂಚಿನ ಒರತೆ ಒರೆಸುವವರೂ ಇಲ್ಲ. ಕೇವಲ ತಮ್ಮ ಸ್ವಾರ್ಥಕ್ಕಾಗಿ ಮಾತ್ರವೇ ಕಾರ್ಯ ನಿರ್ವಹಿಸುತ್ತಿರುವ ವರ್ಗ ನಮ್ಮ ಮುಂದಿದೆ ಎನ್ನುವುದು ಖೇದಕರ.
ಎಲ್ಲಿಯ ತನಕ ವಿವಾದ?
ರಾಜ್ಯದೆಲ್ಲೆಡೆ ದಿನ ಬೆಳಗಾಗುತ್ತಿದ್ದಂತೆ ವಿವಾದಕ್ಕೆ ಬಣ್ಣ ಹಚ್ಚುವ ಕಾರ್ಯಗಳು ನಡೆಯುತ್ತಿವೆ. ಇದಕ್ಕೆ ರಾಜಕೀಯ ಮುಖಂಡರು ತಮ್ಮ ಕೊಡುಗೆಗಳನ್ನು ನೀಡುತ್ತಾರೆ. ವಿಶ್ವಕ್ಕೆ ಶಾಂತಿ ಸೌಹಾರ್ದತೆ ಸಹೋದರತೆಯ ಪಾಠ ಕಲಿಸಿದ ನಮ್ಮ ಭಾರತ(ಹಿಂದೂಸ್ತಾನ)ದ ನೆಲ, ಜಲ, ವಾಯುವೊಂದು, ನಾವೆಲ್ಲ ಒಂದೇ ಎಂದು ಹಾಡಿ ನಲಿದವರು ನಾವು ಪರಸ್ಪರ ಮುಖ ನೋಡಲು ಮರುಗುವ ಸನ್ನಿವೇಶ. ತಪ್ಪುಗಳನ್ನು ತಿದ್ದಬೇಕಾದ ಮಾಧ್ಯಮಗಳಲ್ಲೂ ಸಂಘರ್ಷ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲ. ಸರಕಾರ, ಇತರ ಪಕ್ಷಗಳಿಗೂ ಶಾಂತಿ ನೆಲೆಸುವುದು ಅಗತ್ಯವಿಲ್ಲ. ಕೋವಿಡ್ ಸಂಕಷ್ಟದಿಂದ ತಲೆ ಎತ್ತುತ್ತಿದ್ದಂತೆ ಮತ್ತೆ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಯಾವುದೋ ಒಂದು ವರ್ಗದ ಸಿರಿವಂತ ಕುಟುಂಬಸ್ಥರು ಮಾಡಿದ ತಪ್ಪಿನಿಂದಾಗಿ ಬೀದಿ ಬದಿಯಲ್ಲಿ ಒಪ್ಪೊತ್ತಿನ ಅನ್ನಕ್ಕಾಗಿ ನಿಯತ್ತಿನಿಂದ ಹಣ್ಣು, ಮೀನು, ಮಾಂಸ ವ್ಯಾಪಾರ ಮಾಡಿ ಕೂಲಿ ಸಂಪಾದಿಸುವ ಬಡಪಾಯಿಗಳ ಹೊಟ್ಟೆಗೆ ಕತ್ತರಿ ಬಿದ್ದಿದೆ. ಇವರ ಬೆಂಬಲಕ್ಕೆ ಇಂದು ಯಾರೂ ಇಲ್ಲ. ಕೇವಲ ಹೇಳಿಕೆಗಳನ್ನು ನೀಡುವ ನಾಯಕರು ಸಂಗರ್ಷಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಶಾಂತಿಯ ನೆಲೆಬೀಡಾಗಿರುವ ಕರುನಾಡನ್ನು ಮತ್ತೆ ಒಗ್ಗೂಡಿಸಿ ಅಭಿವೃದ್ಧಿಯ ಮಂತ್ರ ಜಪಿಸಬೇಕು.
ಇನ್ನೆಷ್ಟು ದಿನಗಳ ತನಕ ಇಂತಹ ಸಂಘರ್ಷದಲ್ಲೇ ಉಳಿಯಬೇಕು? ಮತ್ತೆ ಯಾವ ಸ್ವರೂಪವನ್ನು ನಾವುಗಳು ಕಾಣಬೇಕು? ರಾಜಕೀಯ ನಾಯಕರು ಎಚ್ಚೆತ್ತುಕೊಳ್ಳಬೇಕು. ಈಗಾಗಲೇ ದ್ವೀಪರಾಷ್ಟ್ರ ಶ್ರೀಲಂಕಾ ಹಾಗೂ ಕಣಿವೆ ರಾಷ್ಟ್ರ ಪಾಕ್ ನಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ರಾಜಕೀಯ ಅರಾಜಕತೆಯ ವಿರುದ್ಧ ಜನರು ಧಂಗೆ ಎದ್ದಿದ್ದಾರೆ. ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಶಾಂತಿ ಸೃಷ್ಠಿಸುವ, ನಾಡು ಒಡೆಯುವ ಎಲ್ಲಾ ವಿಷ ಜಂತುಗಳನ್ನು, ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಕಾರ್ಯವಾಗಬೇಕು.
ಇಂತಹ ವಿವಾದಗಳಿಗೆ ಸರಕಾರ, ವಿರೋಧ ಪಕ್ಷದ ನಾಯಕರು ಹಾಗೂ ಮುಖಂಡರು ಜೊತೆಯಾಗಿ ಕುಳಿತು ಇತಿಶ್ರೀ ಹಾಡಬೇಕು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಪಣತೊಡಬೇಕು. ಅಧಿಕಾರಕ್ಕೇರುವ ಮುನ್ನ ಮಾಡಿಕೊಂಡ ಶಪತವನ್ನು ಉಳಿಸಿ ರಾಜ್ಯದ ಹಿತ ಕಾಪಾಡಲು ಎಲ್ಲರೂ ಕೈ ಜೋಡಿಸಬೇಕು.