ಕಾರ್ಕಳ, ಏ. 04 (DaijiworldNews/SM): ಮೂಡಬಿದ್ರಿ-ಕಾರ್ಕಳ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಸಾಣೂರು ಮುರತ್ತಂಗಡಿ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಜೆಸಿಬಿಯಡಿಯಲ್ಲಿ ಸಿಲುಕಿ ಬೈಕ್ ಸವಾರ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ. ಇರ್ವತ್ತೂರಿನ ಅವಿನಾಶ್(27) ಘಟನೆಯಲ್ಲಿ ಮೃತಪಟ್ಟ ಯುವಕ.
ವೃತ್ತಿಯಲ್ಲಿ ಪೈಂಟರ್ ಆಗಿರುವ ಅವಿನಾಶ್ ಪೈಟಿಂಗ್ ಕೆಲಸ ಮುಗಿಸಿ ಮನೆಯ ಕಡೆಗೆ ಬೈಕ್ನಲ್ಲಿ ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ದೇಹದ ಭಾಗ ಛಿದ್ರಗೊಂಡಿದ್ದು, ಹೊಟ್ಟೆಯ ಭಾಗದಿಂದ ಕರಳು ಹೊರ ಬಿದ್ದಿದೆ.
ಕಾರ್ಕಳ ನಗರ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಜೆಸಿಬಿ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿರುವ ಮಾಹಿತಿ ಲಭಿಸಿದೆ. ಅದೇ ಕಾರಣದಿಂದ ಜೆಸಿಬಿ ತೆರವು ಕಾರ್ಯ ಒಂದಿಷ್ಟು ಹೊತ್ತು ವಿಳಂಬವಾಗಿತ್ತಾದರೂ, ಬದಲಿ ಚಾಲಕನ ಸಹಕಾರದಿಂದ ಜೆಸಿಬಿಯನ್ನು ತೆರವುಗೊಳಿಸಿ ಮೃತದೇಹವನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಇರ್ವತ್ತೂರು ಉದಯ ಎಸ್.ಕೋಟ್ಯಾನ್ ಘಟನಾ ಸ್ಥಳಕ್ಕೆ ಅಗಮಿಸಿ ಮೃತ ಯುವಕನ ಗುರುತು ಪತ್ತೆ ಹಚ್ಚಿ ಮನೆ ಮಂದಿಯನ್ನು ಸಂಪರ್ಕಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು ಸಹಕಾರ ನೀಡಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.