ಮಂಗಳೂರು, ಏ 04 (DaijiworldNews/DB): ಜಿಲ್ಲೆಯಲ್ಲಿ ದ್ವೇಷ ರಾಜಕಾರಣ ಅತಿರೇಕಕ್ಕೆ ತಲುಪಿದೆ. ಜಿಲ್ಲಾಡಳಿತ ತತ್ ಕ್ಷಣ ಇದನ್ನು ಹತ್ತಿಕ್ಕಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಶಾಂತಿ, ಸಾಮರಸ್ಯ ಜಿಲ್ಲೆಯಲ್ಲಿ ನೆಲೆಸಬೇಕು. ಸರ್ವ ಧರ್ಮೀಯರ ಸಭೆ ಕರೆದು ಈ ಬಗ್ಗೆ ಜನರಿಗೆ ತಿಳಿ ಹೇಳಬೇಕು. ಹಿಂಸೆಗೆ ಹಿಂಸೆ, ದ್ವೇಷಕ್ಕೆ ದ್ವೇಷ ಉತ್ತರವಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಬುದ್ದಿವಂತರ ಜಿಲ್ಲೆಯನ್ನು ಕೋಮುವಾದದ ಪ್ರಯೋಗಶಾಲೆ ಮಾಡುತ್ತಿರುವುದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಾದ ಅವಶ್ಯವಿದೆ. ಹಿಂದೂಯೇತರರಿಗೆ ದೇವಳಗಳಲ್ಲಿ ವ್ಯಾಪಾರ ನಿರ್ಬಂಧ, ಹಲಾಲ್ ಬಹಿಷ್ಕಾರ ಮುಂತಾದವುಗಳ ಮೂಲಕ ಬಿಜೆಪಿ ಧ್ರುವೀಕರಣ ಮಾಡುತ್ತಿದೆ. ದ್ವೇಷ ಹರಡುವವರನ್ನು ಮಟ್ಟ ಹಾಕಬೇಕೇ ಹೊರತು ಅವರಿಗೆ ಬೆಂಬಲಿಸಬಾರದು ಎಂದವರು ಇದೇ ವೇಳೆ ಒತ್ತಾಯಿಸಿದರು.
ಕೊರೋನದಿಂದ ಆರ್ಥಿಕ ಸಂಕಷ್ಟಕ್ಕೊಳಗಾದ ಜನ ಸಾಮಾನ್ಯರ ಮೇಲೆ ವಿದ್ಯುತ್, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಾಗಿದೆ. ಆದರೆ, ಈ ವೈಫಲ್ಯಗಳನ್ನು ಮರೆ ಮಾಚುವ ಉದ್ದೇಶದಿಂದ ಬಿಜೆಪಿ ಬೆಂಬಲಿತ ಸಂಘಟನೆಗಳು ದ್ವೇಷ ರಾಜಕಾರಣ ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸದಲ್ಲಿ ನಿರತವಾಗಿವೆ. ಜಿಲ್ಲಾಡಳಿತ ತತ್ ಕ್ಷಣ ಇಂತಹವರನ್ನು ಹತ್ತಿಕ್ಕಿ ಜಿಲ್ಲೆಯ ಸಾಮರಸ್ಯ ಹಾಳಾಗದಂತೆ ನೋಡಿಕೊಳ್ಳಬೇಕು ಎಂದವರು ಆಗ್ರಹಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಪ್ರಕಾಶ್ ಸಾಲ್ಯಾನ್, ಶಶಿಧರ ಹೆಗ್ಡೆ, ನೀರಜ್ ಪಾಲ್, ಉಮೇಶ್ ದಂಡಕೇರಿ, ಸುದರ್ಶನ ಜೈನ್, ಮುಸ್ತಫ, ಅಬ್ದುಲ್ ಗಫೂರ್, ಲ್ಯಾನ್ಸಿ ಲಾಟ್ ಪಿಂಟೋ, ಹರಿನಾಥ್ ಮತ್ತಿತರರು ಉಪಸ್ಥಿತರಿದ್ದರು.