ಮಂಗಳೂರು, ಡಿ25(SS): ಕೆಲ ದಿನಗಳ ಹಿಂದೆಯಷ್ಟೇ ಬಂಟ್ವಾಳದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮಹಾರುದ್ರಯಾಗ ನಡೆಸಲಾಗಿತ್ತು. ಇದೀಗ ಕರಾವಳಿಯಲ್ಲಿ 2019ರ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಗೆದ್ದು ಬರಲು ಹರಕೆಯ ಯಕ್ಷಗಾನವನ್ನು ನಡೆಸಲು ಮೋದಿ ಅಭಿಮಾನಿಗಳು ಮುಂದಾಗಿದ್ದಾರೆ.
ಕರಾವಳಿಯಲ್ಲಿ ಮೋದಿ ಗೆಲ್ಲಿಸಲು ಹುಟ್ಟಿಕೊಂಡಿರುವ ಟೀಂ ಮೋದಿಯ ಸದಸ್ಯರು, ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಡೆಯಿಂದ 'ಸಂಪೂರ್ಣ ದೇವಿ ಮಹಾತ್ಮೆ' ಯಕ್ಷಗಾನ ಬಯಲಾಟ ನಡೆಸಲು ನಿರ್ಧರಿಸಿದ್ದಾರೆ. ಈ ಹರಕೆಯ ಯಕ್ಷಗಾನ ಬಯಲಾಟವು ಇದೇ ಬರುವ ಶನಿವಾರ ಅಂದರೆ ಡಿ.29ರಂದು ಮಣ್ಣಗುಡ್ಡೆ ಗುರ್ಜಿ ಸಮೀಪದ ಮೈದಾನದಲ್ಲಿ ನಡೆಯಲಿದೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲೂ ಮೋದಿ ಗೆದ್ದು ಬರಬೇಕು ಎಂದು ಕರಾವಳಿಯಲ್ಲಿ ಮೋದಿ ಅಭಿಮಾನಿಗಳು ಪೂಜೆ, ಪುನಸ್ಕಾರಗಳನ್ನು ನಡೆಸಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಎನ್ನುವಂತೆ 'ಸಂಪೂರ್ಣ ದೇವಿ ಮಹಾತ್ಮೆ' ಯಕ್ಷಗಾನ ಬಯಲಾಟವನ್ನೇ ನಡೆಸಲು ಮುಂದಾಗಿದ್ದಾರೆ.