ಉಡುಪಿ, ಏ 04 (DaijiworldNews/DB): ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿ ನೆಕ್ಲೆಸ್ ಕಳವುಗೈದಿದ್ದ ಆರೋಪಿಯನ್ನು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುರೇಶ್ ಅಲಿಯಾಸ್ ಸೂರ್ಯ ಅಲಿಯಾಸ್ ಕಪಿ ( 31) ಎಂದು ಗುರುತಿಸಲಾಗಿದೆ. ಈತ ಮೂಲತಃ ಬ್ರಹ್ಮಾವರದ ಪೆಜಮಂಗೂರು ಗ್ರಾಮದ ಪ್ರಗತಿ ನಗರದವನದಾಗಿದ್ದಾನೆ.
ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಕನ್ನಾರು ವಾಸು ಪೂಜಾರಿ ಅವರ ಮನೆಯಲ್ಲಿ ಏಪ್ರಿಲ್ 1ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಅವರ ಪತ್ನಿ ಪ್ರೇಮಾ ಒಬ್ಬರೇ ಇದ್ದ ಸಂದರ್ಭದಲ್ಲಿ ಘಟನೆ ನಡೆದಿತ್ತು. ಪ್ರೇಮಾ ಮನೆ ಹೊರಗಡೆ ಪಾತ್ರೆ ತೊಳೆಯುತ್ತಿದ್ದಾಗ ಆಗಂತುಕನೊಬ್ಬ ಮನೆ ಹಿಂಬದಿ ಬಾಗಿಲ ಚಿಲಕ ಮುರಿದು ಒಳ ಪ್ರವೇಶಿಸಿ ಮನೆಯನ್ನು ಜಾಲಾಡಿ ಸುಮಾರು 10 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ನ್ನು ಕಳವುಗೈದು ಪರಾರಿಯಾಗಿದ್ದ. ಇದನ್ನು ಗಮನಿಸಿದ ಪ್ರೇಮ ತತ್ ಕ್ಷಣ ಪತಿಗೆ ವಿಷಯ ತಿಳಿಸಿದ್ದಾರೆ. ಬಳಿಕ ತಡ ಮಾಡದೆ ಬ್ರಹ್ಮಾವರ ಠಾಣೆಯಲ್ಲಿ ಹಗಲು ಕನ್ನ ಕಳವು ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಬೆನ್ನು ಬಿದ್ದ ಪೊಲೀಸರು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ಮಾರ್ಗದರ್ಶನದಂತೆ ಪಿ.ಎಸ್.ಐ.ಗಳಾದ ಗುರುನಾಥ ಬಿ. ಹಾದಿಮನಿ ಹಾಗೂ ಮುಕ್ತಾಬಾಯಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು ಕೂಡಲೇ ಕಾರ್ಯ ಪ್ರವೃತ್ತರಾದರು. ಯಾವುದೇ ತಾಂತ್ರಿಕ ಸಹಾಯವಿಲ್ಲದೆ ಕೇವಲ ಪೊಲೀಸ್ ಸಂಪ್ರದಾಯಿಕ ವಿಧಾನದಲ್ಲಿ ಸಾರ್ವಜನಿಕರಿಂದ ತಳಮಟ್ಟದ ಮಾಹಿತಿ ಸಂಗ್ರಹಿಸಿ ಆರೋಪಿಯು ಕಳವು ಮಾಡಿದ ದಿನ ಧರಿಸಿದ ಬಟ್ಟೆಯ ಜಾಡನ್ನು ಹಿಡಿದು ಕೊನೆಗೂ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಆರೋಪಿಯಿಂದ 50 ಸಾವಿರ ರೂ. ಬೆಲೆ ಬಾಳುವ ಚಿನ್ನದ ನೆಕ್ಲೇಸ್ ನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪ್ರಕರಣ ಭೇಧಿಸಿದಂತಾಗಿದೆ.
ಈತ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಎರಡು ಕಳ್ಳತನದ ಪ್ರಕರಣದ ಆರೋಪಿಯಾಗಿದ್ದು, ತಾಮ್ರ , ಚಿನ್ನದ ಕಿವಿಯೋಲೆ , ಉಂಗುರ ಕಳವು ಮಾಡಿರುತ್ತಾನೆ . ಆರೋಪಿಯು ಕಾನೂನು ಸಂಘರ್ಷಕ್ಕೊಳಗಾದ ಬಾಲಕನಾಗಿ 7 ವರ್ಷ ರಿಮ್ಯಾಂಡ್ ಹೋಮ್ ನಲ್ಲಿ ಶಿಕ್ಷೆ ಅನುಭವಿಸಿರುವುದು ತನಿಖೆಯಲ್ಲಿ ಕಂಡು ಬಂದಿರುತ್ತದೆ. ಪ್ರಸ್ತುತ ಬೆಂಗಳೂರಿನ ಬಿಬಿಎಂಪಿಯಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿದ್ದನು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಂತೆ ಉಡುಪಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರ ಅನಂತ ಪದ್ಮನಾಭ ಅವರ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಗುರುನಾಥ ಬಿ. ಹಾದಿಮನಿ ಹಾಗೂ ತನಿಖೆ ಪಿ.ಎಸ್.ಐ ಮುಕ್ತಾಬಾಯಿ, ಪ್ರೊಬೆಷನರಿ ಪಿ.ಎಸ್.ಐ. ಸುಬ್ರಹ್ಮಣ್ಯ ದೇವಾಡಿಗ, ಸಿಬಂದಿಗಳಾದ ವೆಂಕಟರಮಣ ದೇವಾಡಿಗ , ಪ್ರವೀಣ್ ಶೆಟ್ಟಿಗಾರ್, ರಾಘವೇಂದ್ರ ಕಾರ್ಕಡ , ದಿಲೀಪ್ ಕುಮಾರ್ , ಅಜ್ಮಲ್ ಮತ್ತು ಚಾಲಕ ಅಣ್ಣಪ್ಪ ಇವರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.