ಮಂಗಳೂರು, ಏ. 4 (DaijiworldNews/SM): ಜೀವನದ ವಿವಿಧ ಅನುಭವಗಳು ಉತ್ತಮ ವ್ಯಕ್ತಿತ್ವ ರೂಪಿಸಲು ಕಾರಣವಾಗುತ್ತಿವೆ. ಆದ್ದರಿಂದ ಬದುಕಿನ ಎಲ್ಲಾ ಹಂತಗಳನ್ನು ಚೆನ್ನಾಗಿ ಅನುಭವಿಸಿ ಅದರ ರುಚಿಯನ್ನು ಸವಿಯಬೇಕು ಎಂದು ವಿಶಾಖ ಪಟ್ಟಣದ ಗೀತಂ ಯೂನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸಸ್ನ ಸಹ ಕುಲಾಽಪತಿ ಹಾಗೂ ಭುವನೇಶ್ವರ ಏಮ್ಸ್ನ ಮಾಜಿ ನಿರ್ದೇಶಕರಾದ ಡಾ| ಗೀತಾಂಜಲಿ ಬಟ್ಮನಬನ್ ಹೇಳಿದರು.
ಅವರು ಶನಿವಾರ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಈ ಕ್ಯಾಂಪಸ್ನಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಪದವಿ ಪಡೆದು ಹೊರ ಬರುತ್ತಿರುವ ವಿದ್ಯಾರ್ಥಿಗಳು ಸಮಾಜಕ್ಕೆ ನೆರವು ಒದಗಿಸುವ ಆಸ್ಪತ್ರೆಗಳಾಗಬೇಕು. ಕಲಿಕೆ ನಿರಂತರವಾಗಿದ್ದು, ಬದುಕಿರುವ ತನಕ ಕಲಿಯುತ್ತಿರಬೇಕು. ಉತ್ತಮ ವಿಚಾರಗಳಿಗೆ ಸದಾ ಸ್ಪಂದಿಸುವ ವ್ಯಕ್ತಿಗಳಾಗಬೇಕೆಂದರು.
ಗೌರವ ಅತಿಥಿಯಾಗಿದ್ದ ಹೈಕೋರ್ಟ್ ಮಾಜಿ ನ್ಯಾಯಾಧಿಶರಾದ ಜಾನ್ ಮೈಕಲ್ ಡಿಕುನ್ಹಾ ಅವರು ಮಾತನಾಡಿ, ವೈದ್ಯರು, ನರ್ಸ್ಗಳು ಮತ್ತು ನ್ಯಾಯಾಧೀಶರ ಸಹಿತ ಎಲ್ಲಾ ವೃತ್ತಿನಿರತರು ತಮ್ಮ ಕೆಲಸ ಕಾರ್ಯಗಳಲ್ಲಿ ವಿಶ್ವಾಸಾರ್ಹತೆಯನ್ನು ಕಾಯ್ದು ಕೊಂಡು ಜನರು ತಮ್ಮ ಮೇಲೆ ಇರಿಸಿದ ನಂಬಿಕೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸ ಬೇಕೆಂದರು.