ಕಾರ್ಕಳ, ಏ 03 (DaijiworldNews/DB): ಮರ್ಣೆ ಪಂಚಾಯತ್ ವ್ಯಾಪ್ತಿಯ ಅಜೆಕಾರು ಕಲ್ಲೆಚ್ಚಿಯಲ್ಲಿ ನಡೆಸಲಾಗುತ್ತಿರುವ ಕಲ್ಲುಕೋರೆ ಗಣಿಗಾರಿಕೆಯನ್ನು ತತ್ ಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಅಜೆಕಾರು ಶಾಖೆ, ಕಾರ್ಕಳ-ಹೆಬ್ರಿ ತಾಲೂಕು ರೈತ ಸಂಘ ಹಾಗೂ ಸ್ಥಳೀಯ ನಿವಾಸಿಗಳಿಂದ ಕಲ್ಲುಕೋರೆ ಕ್ರಷರ್ ಮುಂಭಾಗ ಭಾನುವಾರ ಬೃಹತ್ ಪ್ರತಿಭಟನೆ ಮತ್ತು ಮೆರವಣಿಗೆ ನಡೆಯಿತು.
ಇಲ್ಲಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಸುತ್ತಮುತ್ತಲ ಪರಿಸರ ನಾಶವಾಗುತ್ತಿದ್ದು, ಸ್ಥಳೀಯ 20 ಮನೆಗಳಿಗೆ, ಸುತ್ತಲಿನ ಕೃಷಿ ಜಮೀನುಗಳಿಗೆ ಅಪಾರ ಹಾನಿಯುಂಟಾಗಿದೆ. ಬಂಡೆಯನ್ನು ಪುಡಿ ಮಾಡಲು ಉಪಯೋಗಿಸುವ ಡೈನಮೈಟ್ನಿಂದ ಬಂಡೆ ಒಡೆದು ಹೋಗುವಾಗ ಅದುರುವಿಕೆಯಿಂದಾಗಿ ಆಸುಪಾಸಿನ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ. ಹೀಗೇ ಮುಂದುವರೆದಲ್ಲಿ ಮನೆಗಳು ಕುಸಿದು ಬೀಳುವುದರೊಂದಿಗೆ, ನಿವಾಸಿಗಳನ್ನು ಅವಶೇಷಗಳಡಿಯಿಂದ ಎಳೆದು ತೆಗೆಯಬೇಕಾದೀತು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎನ್.ಎಸ್. ವರ್ಮ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಅನ್ಯಾಯವಾಗಬಾರದು, ರೈತರ ಮನೆ ಉಳಿಯುವಂತಾಗಬೇಕು. ಬಂಡೆ ಒಡೆಯುವ ಸಂದರ್ಭದಲ್ಲಿ ರಸ್ತೆಗಳ ಮೇಲೆ ಬಂಡೆಗಳ ಚೂರುಗಳು ಎಸೆಯಲ್ಪಡುತ್ತಿದ್ದು ಈ ಭಾಗದ ರಸ್ತೆಗಳಿಂದ ತೆರಳುವ ಶಾಲೆಗೆ ತೆರಳುವ ಮಕ್ಕಳಿಗೆ ಅಪಾಯವಿದೆ. ರೈತರ ನೆಮ್ಮದಿ ನಮಗೆ ಮುಖ್ಯವಾಗಿದ್ದು ಜನನಿಬಿಡ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಯನ್ನು ಮುಂದುವರಿಸಲು ನಾವು ಬಿಡುವುದಿಲ್ಲ. ಇದನ್ನು ಕೂಡಲೇ ಮುಚ್ಚುವಂತಾಗಬೇಕು. ಇಲ್ಲದಿದ್ದರೆ ನಾವು ಮುಂದಿನ ದಿನಗಳಲ್ಲಿ ತೀವ್ರ ಚಳುವಳಿ ಹಮ್ಮಿಕೊಳ್ಳುತ್ತೇವೆ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಗಣಿಗಾರಿಕೆ ಮುಚ್ಚುವವರೆಗೆ ನ್ಯಾಯಯುತವಾಗಿ ಹೋರಾಟ ಮುಂದುವರಿಸಲಾಗುವುದು ಎಂದರು.
ಮಂಗಳೂರು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಮಾತನಾಡಿ, ಗಣಿಗಾರಿಕೆ ನಡೆಯುವ ಸ್ಥಳದ ಸುತ್ತಲಿನ ಪ್ರದೇಶ, ಇಲ್ಲಿನ ಮನೆಗಳ ಸ್ಥಿತಿ ಹೀನಾಯವಾಗಿದ್ದು ಇದಕ್ಕೆ ನ್ಯಾಯ ದೊರಕದೇ ಹೋದಲ್ಲಿ, ಕಲ್ಲು ಗಣಿಕಾರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರ ಸ್ಥಗಿತಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ, ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಉಡುಪಿ ರೈತ ಸಂಘದ ಜಿಲ್ಲಾಧ್ಯಕ್ಷ ಗೋಪಾಲ ಕುಲಾಲ್, ಉಪಾಧ್ಯಕ್ಷ ಸುರೇಶ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ನಾಯ್ಕ್, ಕಾರ್ಕಳ ಸಂಘದ ಅಧ್ಯಕ್ಷ ವೆಲೇರಿಯನ್ ಲೋಬೋ, ಉಪಾಧ್ಯಕ್ಷ ದಿನೇಶ್ ಕೋಟ್ಯಾನ್, ಹೆಬ್ರಿ ತಾಲೂಕು ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಗೋಪಾಲ ಕುಲಾಲ್, ಆದರ್ಶ್, ಸ್ಥಳೀಯರಾದ ಸತೀಶ್ ಪೂಜಾರಿ, ರತ್ನಾಕರ ಪೂಜಾರಿ, ಜಯಂತ್ ಕುಲಾಲ್ ಮೊದಲಾದವರಿದ್ದರು.