ಕಾರ್ಕಳ, ಏ 03 (DaijiworldNews/HR): ಜಲಾಲ್ ಮಾಂಸವೊಂದೇ ಶೇಷ್ಠವಲ್ಲ. ನಾವೆಲ್ಲರೂ ವಿದೌಟ್ ಹಲಾಲ್ ಮಾಂಸದಲ್ಲಿ ಜನಜೀವನ ಸಾಗಿಸಿ ಬಂದವರು. ಹಲಾಲ್ ಒಂದು ಧರ್ಮದ ವಿಚಾರ. ಹಲಾಲ್ ಸರ್ಟಿಫಿಕೇಟ್ ಪಡೆಯಬೇಕೆಂಬ ನಿರ್ದೇಶನ ಜಾಸ್ತಿಯಾಗುತ್ತಿದೆ. ಮುಸಲ್ಮಾನರು ಹಲಾಲ್ ಮಾಂಸ ತಿನ್ನುವುದಕ್ಕೆ ನಮ್ಮದೇನು ವಿರೋಧ ಇಲ್ಲ. ಎಲ್ಲರಿಗೂ ಹಲಾಲ್ ತಿನ್ನಿಸಬೇಕು ಎಂಬ ಭಾವನೆ ಸರಿಯಲ್ಲ. ಈ ಬಗ್ಗೆ ಕೋರ್ಟ್ನಲ್ಲಿ ಕೇಸುಗಳು ಇವೆ ಸರಕಾರ ಎಲ್ಲರ ಭಾವನೆಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಶಾದಿ ಭಾಗ್ಯ, ಟಿಪ್ಪು ಜಯಂತಿ ಜಾರಿಗೆ ತಂದರು. ಆ ಮೂಲಕ ಮುಸ್ಲಿಂ ಓಲೈಕೆ ನಡೆಯುತ್ತಾ ಬಂತು. ಅದೇ ಮಾನಸಿಕತೆ ರಾಜ್ಯದ ಮುಂದೆ ಹೇರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಕಾಂಗ್ರೆಸ್,ಜನತಾದಳದವರಿಗೆ ಜನರೆಂದರೆ ಓಟು ಮಾತ್ರ ಕಾಣುವುದು. ಅಂದಿನಿಂದ ಇಂದಿನವರೆಗೆ ಮತದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದ್ದಾರೆ. ದೇಶದ ಜನ ಎರಡು ಪಕ್ಷಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಎಲ್ಲಿ ಎಂಬುದನ್ನು ಟಾರ್ಚ್ ಲೈಟ್ ಹಾಕಿ ಹುಡುಕುವ ಪರಿಸ್ಥಿತಿ ಇದೆ. ಎರಡು ಪಕ್ಷಗಳ ಮುಖಂಡರುಗಳು ತನ್ನ ಮಾನಸಿಕತೆಯನ್ನು ಈಗಲಾದರೂ ಬದಲಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ಜನರ ಭಾವನೆ ಜೊತೆ ನಿಲ್ಲುವ ಪಾರ್ಟಿ. ಜನ ಅಪೇಕ್ಷೆ ಪಡುವುದನ್ನು, ಇಷ್ಟಪಡುವುದನ್ನು ಜಾರಿಗೆ ತರುತ್ತದೆ. ಸಂಘರ್ಷ ಆಗದಂತೆ ಸಮಾಜ ಒಟ್ಟಿಗೆ ತೆಗೆದುಕೊಂಡು ಹೋಗುವುದು ಬಿಜೆಪಿ ಚಿಂತನೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕೋಮು ಗಲಭೆ ನಡೆದಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಕೋಮುಗಲಭೆ, ಪ್ರಾಣತ್ಯಾಗ ಮಾಡಿ ಹಲವರು ವಿಧವೆಯರಾದರು. ಬಿಜೆಪಿ ರಾಜ್ಯ ಮತ್ತು ದೇಶದಲ್ಲಿ ಒಡೆದು ಆಳುವ ನೀತಿಯನ್ನು ಮಾಡುತ್ತಿಲ್ಲ ಎಂದರು.
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ ತನಿಖೆಯನ್ನು ಎನ್ ಐ ಎ ನಡೆಯುತ್ತಿದೆ. ಎಫ್ ಐಆರ್ ದಾಖಲು ಮಾಡಿದೆ. ಈ ತನಿಖೆಯಲ್ಲಿ ಸತ್ಯಾಸತ್ಯತೆ ಹೊರ ಬರಲಿದೆ. ಸಾವಿನ ಹಿಂದಿನ ಕಾರಣ, ಕೊಲೆಗೆ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು. ರಸ್ತೆಯಲ್ಲಿ ಮಚ್ಚು ಲಾಂಗ್ ಮೂಲಕ ಪೊಲೀಸರನ್ನು ಹಿಮ್ಮೆಟ್ಟಿಸಿರುವ ಕುರಿತು ತನಿಖೆಯಾಗಬೇಕು. ಯಾರ ಮನೆಯಲ್ಲಿ ಮಚ್ಚು ಲಾಂಗು ಇತ್ತು, ಯಾಕಾಗಿ ಅಲ್ಲಿಗೆ ಬಂತು ತನಿಖೆಯಾಗಬೇಕು. ಪ್ರಕರಣ ಹಿಂದಿನ ಉದ್ದೇಶ ಏನು ಎಂಬುವುದು ತನಿಖೆಯಲ್ಲಿ ಹೊರಬರಬೇಕು. ಘಟನೆಯ ತನಿಖೆ ಸರಿಯಾಗಿ ನಡೆದರೆ ಶಾಂತಿ ನೆಲೆಸಲು ಪ್ರಮುಖ ಹೆಜ್ಜೆಯಾಗಬಹುದು ಎಂದಿದ್ದಾರೆ.
ಇನ್ನು ಎಸ್ ಡಿಪಿ ಐ, ಪಿಎಫ್ ಐ ಇಡೀ ದೇಶದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಜಾತಿ, ಧರ್ಮ ಒಡೆದಾಳುವ ಹಿಜಾಬ್ ವಿಚಾರದಲ್ಲಿ ಬಡ ಮಕ್ಕಳನ್ನು ಎತ್ತಿಗಟ್ಟಿದರು. ಈ ಎಲ್ಲದರ ಹಿಂದೆ ದೇಶೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಾ ಬಂದಿದೆ. ಎನ್ಐಎ ತನಿಖೆಯು ಪರಿಪೂರ್ಣಗೊಂಡಾಗ ಇನ್ನಷ್ಟು ಅಘಾತಕಾರಿ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.