ಕಾರ್ಕಳ, ಏ 03 (DaijiworldNews/HR): ಹಿಂದೂಗಳ ಭಾವನೆಗಳಿಗೆ ದಕ್ಕೆ ಉಂಟಾದಾಗ ಹಾಗೂ ಮೂಲಭೂತವಾದಿಗಳಿಂದ ಹಿಂದುಗಳ ಮಾರಣಹೋಮ ನಡೆಯುತ್ತಿರುವಾಗ ಜಾತ್ಯತೀತ ಪಕ್ಷ ಎನ್ನಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಮುಖಂಡರೇಕೆ ಮೌನಕ್ಕೆ ಶರಣಾಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಈಶ್ವರಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾರ್ಕಳದ ನಿಟ್ಟೆ ಪದವು ಪರಿಸರದಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಇಬ್ಬಗೆ ನೀತಿಯಿಂದಾಗಿ ಆ ಪಕ್ಷವನ್ನು ದೇಶದ ಮತದಾರರೇ ತಕ್ಕಶಾಸ್ತ್ರಿ ಮಾಡಿದ್ದಾರೆ ಎಂದರು.
ಬಹುತೇಕ ಮಂದಿಗೆ ಹಿಜಾಬ್ ಎಂದರೆ ಎನ್ನೆಂದೇ ತಿಳಿದಿರಲಿಲ್ಲ. ಇಂತಹ ಸಂದರ್ಭದಲ್ಲಿ ಹಿಜಾಬ್ ವಿವಾದ ಹುಟ್ಟಿಸಿದವರು ಯಾರು? ಆ ಪ್ರಕರಣದ ಹಿಂದಿರುವ ಶಕ್ತಿಯೇ ಪಿಡಿಎಫ್, ಎಸ್ಡಿಪಿಐ ಸಂಘಟನೆಗಳು. ಹರ್ಷ ಕೊಲೆ ಸಂಚಿನ ಹಿಂದೆಯೂ ಆ ಸಂಘಟನೆಗಳೇ ಕಾರ್ಯಚರಿಸಿದೆ. ಹರ್ಷನ ಕೊಲೆ ಕೃತ್ಯವನ್ನು ಕಾಂಗ್ರೆಸ್ನ ಯಾವುದೇ ಮುಖಂಡನು ಬಲವಾಗಿ ಖಂಡಿಸಿಲ್ಲ. ಕೇವಲ ಮುಸ್ಲಿಂಮರನ್ನೇ ತೃಪ್ತಿ ಪಡಿಸುವ ಪ್ರಯತ್ನ ಒಳ್ಳೆಯದಲ್ಲ. ಇಂತಹ ಪರಿಸ್ಥಿತಿಯ ನಡುವೆಯೂ ದೇಶದಲ್ಲಿ ನಿರ್ನಾಮವಾಗಿರುವ ಕಾಂಗ್ರೆಸ್ಸು ಹಿಜಾಬ್, ಹಲಾಲ್, ರಾಷ್ಟ್ರಧ್ವಜದ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ರಾಷ್ಟ್ರಭಕ್ತ ಮುಸಲ್ಮಾನರು, ಸ್ವಾತಂತ್ರ ಹೋರಾಟಗಾರ ಮುಸಲ್ಮಾನರನ್ನು ನಾವು ಗೌರವಿಸುತ್ತೇವೆ. ಅವರಿಂದ ಎಂದಿಗೂ ದೇಶಕ್ಕೆ ಮಾರಕವಾಗುದಿಲ್ಲ. ಆದರೆ ಈ ದೇಶದ ಕಾನೂನಿಗೆ ಗೌರವಿಸದೇ ದೇಶವಿರೋಧಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿರುವವರನ್ನು ನಾವು ಸುಮ್ಮನೆ ಬಿಡುವುದೇ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.
ನೀವು ಯಾವ ಮಾಂಸ ತಿನ್ನುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರಪ್ಪ, ಹಲಾಲ್ ಮತ್ತು ಜಡ್ಕಾ ಎಂಬ ವಿವಾದ ಸೃಷ್ಠಿ ಮಾಡಿರುವುದೇ ಕೆಲವು ವಿವಾದಿತರು. ಮುಸಲ್ಮಾನರು ಹಲಾಲ್ ಮಾಂಸ ತಿನ್ನಲಿ, ಇತರರು ಜಟ್ಕಾ ಮಾಂಸ ತಿನ್ನಲಿ. ನಮಗೇಕೆ ಅದರ ಹುಸಾಬರಿ ಎನ್ನುವ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ಬರೀ ಘೋಷಣೆಯಲ್ಲಿ ತೃಪ್ತಿ ಪಡುತ್ತಿದ್ದಾರೆ. ಆದರೆ ಬಿಜೆಪಿ ತಳಮಟ್ಟದಲ್ಲಿಯೇ ಸಂಘಟನಾತ್ಮಾಕವಾಗಿ ಬೆಳೆದು ಗ್ರಾಮ ಪಂಚಾಯತಿನಿಂದ ದೇಶದ ಚುಕ್ಕಾಣಿ ಹಿಡಿಯುವ ಪ್ರತಿ ಹಂತದಲ್ಲೂ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿಜಪಿ 150ಕ್ಕೂ ಹೆಚ್ಚು ಸ್ಥಾನ ಹಾಗೂ ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬೆಲೆ ಏರಿಕೆ ಎಂಬುವುದು ಇಂದು-ನಿನ್ನೆಯದಲ್ಲ. ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ವಿದೇಶಿ ವಿನಿಮಯದ ಮೇಲೆ ಪೆಟ್ರೋಲ್-ಡೀಸೆಲ್ ಅವಲಂಬಿತವಾಗಿದೆ. ಕೇಂದ್ರ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕು ಅದನ್ನ ಕೈಗೊಳ್ಳುತ್ತದೆ ಎಂದು ಸಮರ್ಥಿಸಿಕೊಂಡರು.