ಮಂಗಳೂರು, ಏ 03 (DaijiworldNews/DB): ಮೂಲ್ಕಿ ಕಾರ್ನಾಡ್ ನ ಮೈಮುನಾ ಫೌಂಡೇಶನ್ ನಲ್ಲಿ ಆಶ್ರಮವಾಸಿಯಾಗಿದ್ದ ಮಹಿಳೆಯೋರ್ವಳ ಮೇಲೆ ಸಂಸ್ಥೆಯ ಮಾಲಕ ಸೇರಿದಂತೆ ಮೂವರು ಹಲ್ಲೆ ನಡೆಸಿ ದೈಹಿಕ ಹಿಂಸೆ ನೀಡಿರುವುದಾಗಿ ಮಹಿಳೆಯು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರಿನಲ್ಲಿ ಹೋಂ ನರ್ಸ್ ಆಗಿ ಮತ್ತು ಪಾಂಡೇಶ್ವರ ಫೋರಂ ಮಾಲ್ ನಲ್ಲಿ ಅಸಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಿವಮೊಗ್ಗ ಮೂಲದ ವನಜಾ ಎಂಬುವವರು ಕೊರೊನಾ ಕಾರಣದಿಂದಾಗಿ ಕೆಲಸನಷ್ಟಕ್ಕೊಳಗಾಗಿ ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಪಂಪ್ ವೆಲ್ ನಲ್ಲಿರುವ ಶಿವಂ ಅವರ ಕಚೇರಿಗೆ ತೆರಳಿ ಕಷ್ಟ ತೋಡಿಕೊಂಡಿದ್ದರು. ಶಿವಂ ಅವರು ಮೈಮುನಾ ಫೌಂಡೇಶನ್ ನ ಆಸಿಫ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ಆಸಿಫ್ ಸಹೋದರ ದಾವೂದ್ ಆಂಬುಲೆನ್ಸ್ ಮುಖಾಂತರ ಮಹಿಳೆಯನ್ನು ಮೈಮುನಾ ಫೌಂಡೇಶನ್ ಗೆ ಕರೆ ತಂದಿದ್ದರು. ಅಲ್ಲಿ ಕಳೆದೊಂದು ವರ್ಷದಿಂದ ವನಜಾ ವಾಸವಾಗಿದ್ದರು.
ವನಜಾ ಆಶ್ರಯ ಪಡೆಯುತ್ತಿದ್ದ ವೇಳೆ ಅಲ್ಲಿ ವಾರ್ಡನ್ ಮತ್ತು ಮ್ಯಾನೇಜರ್ ಆಗಿದ್ದ ಶಶಿಧರ್ ಎಂಬುವವರು ಸಂಸ್ಥೆಯಲ್ಲಿ ಗೋಲ್ ಮಾಲ್ ನಡೆಸಿ ಪರಾರಿಯಾಗಿದ್ದರು. ಆದರೆ ಈತನ ಅಕ್ರಮದಲ್ಲಿ ವನಜಾ ಕೂಡಾ ಶಾಮೀಲಾಗಿದ್ದಾರೆ ಎಂದು ಭಾವಿಸಿದ ಮಾಲಕ ಆಸಿಫ್ ವನಜಾ ಅವರಿಗೆ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದರಲ್ಲದೆ, ಮಹಿಳೆಯ ಎರಡು ಮೊಬೈಲ್ ಫೋನ್, ಮೈಕ್ರೋಮ್ಯಾಕ್ಸ್ ಟ್ಯಾಬ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಇತರ ದಾಖಲಾತಿಗಳನ್ನು ಕಸಿದುಕೊಂಡಿದ್ದಾರೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಾರ್ಚ್ 30ರಂದು ದೂರುದಾರ ಮಹಿಳೆಯ ರೂಂಗೆ ಬಂದ ಆಸಿಫ್ ಜಗಳ ಮಾಡಿದ್ದಲ್ಲದೆ, ಶಿವಂ ಅವರನ್ನು ಕರೆಸಿ ಅವರ ಮುಖಾಂತರವೂ ಹೊಡೆಸಿದ್ದಾರೆ. ಮುಖಕ್ಕೆ ಕೈಯಿಂದ ಮತ್ತು ಎಡಗೈಗೆ ಪ್ಲಾಸ್ಟಿಕ್ ಕುರ್ಚಿಯಿಂದ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶಿವಂ ತೆರಳಿದ ಬಳಿಕ ಮತ್ತೆ ಆಸಿಫ್, ಶಶಿಧರ್ ಮಾಡಿರುವ ತಪ್ಪನ್ನು ಒಪ್ಪಿ ಬರೆದುಕೊಡುವಂತೆ ಒತ್ತಾಯಿಸಿ, ಬೆಲ್ಟ್ ನಿಂದ ಬೆನ್ನು, ಕಾಲಿನ ತೊಡೆ, ಬಲ ಕೈ, ಎಡಕೈ ರಟ್ಟೆಗೆ ಮತ್ತು ವಿಕೆಟ್ ನಿಂದ ತಲೆಗೆ ಹೊಡೆದಿದ್ದಾರೆ.
ಆನಂತರ ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿದ್ದು, ಆಸ್ಪತ್ರೆಯಲ್ಲಿ ಮೇಲಿನಿಂದ ಬಿದ್ದು ತಾಗಿದ್ದು ಎನ್ನಬೇಕು. ಇಲ್ಲವಾದರೆ ಜೀವಸಹಿತ ಬಿಡುವುದಿಲ್ಲ ಎಂದು ತಾಕೀತು ಮಾಡಿದ್ದಾನೆ. ಬಳಿಕ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಪರೀಕ್ಷಿಸಿ ಎಡಗೈ ಮೂಳೆ ಮುರಿತಕ್ಕೊಳಗಾಗಿದೆಯೆಂದು ಬ್ಯಾಂಡೇಜ್ ಹಾಕಿದ್ದಾರೆ.
ಚಿಕಿತ್ಸೆಯ ನಂತರ ಮತ್ತೆ ಮೈಮುನಾ ಫೌಂಡೇಶನ್ ಗೆ ಕರೆದೊಯ್ದು ಕಚೇರಿಯ ಮೇಲಿನ ಕಟ್ಟಡದಲ್ಲಿ ಇರಿಸಿ ಲಾಕ್ ಮಾಡಲು ಮಹಮ್ಮದ್ ಅಫ್ತಾಬ್ ಎಂಬವರು ಆಂಬುಲೆನ್ಸ್ ಡ್ರೈವರ್ ಸತೀಶ್ ಅವರಿಗೆ ಹೇಳಿದ್ದಾರೆ. ಆದರೆ ಚಾಲಕ ಸತೀಶ್ ರಲ್ಲಿ ಮನವಿ ಮಾಡಿ ಕೀ ಪಡೆದುಕೊಂಡಿರುವುದಾಗಿ ದೂರುದಾರ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ದೈಹಿಕ ಹಿಂಸೆ ನೀಡಿದ ಮೊಹಮ್ಮದ್ ಆಸಿಫ್, ಶಿವಂ ಮತ್ತು ಮಹಮ್ಮದ್ ಅಫ್ತಾಬ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದೂರಿತ್ತಿದ್ದಾರೆ.