ಮಂಗಳೂರು, ಏ 03 (DaijiworldNews/HR): ಎಮ್ಸಿಸಿ ಬ್ಯಾಂಕ್ ಎಂದೇ ಪ್ರಸಿದ್ಧವಾಗಿರುವ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ನಿವ್ವಳ ಎನ್ಪಿಎ 1.50% ಮತ್ತು ಆರ್ಥಿಕ ವರ್ಷದಲ್ಲಿ 9.01 ಕೋಟಿ ರೂ.ಗಳ ಲಾಭವನ್ನು ದಾಖಲಿಸಿದೆ.
ಪಿ ಎಫ್ ಎಕ್ಸ್ ಸಲ್ಡಾನ
ಕ್ರಿಶ್ಚಿಯನ್ ಸಮುದಾಯದ ಬ್ಯಾಂಕಿಂಗ್ ಅಗತ್ಯಗಳಿಗಾಗಿ ಪಿ ಎಫ್ ಎಕ್ಸ್ ಸಲ್ಡಾನ ಮತ್ತು ಸಮುದಾಯದ ಇತರ ಮುಖಂಡರಿಂದ ಎಮ್ಸಿಸಿ ಬ್ಯಾಂಕ್ 1912 ರಲ್ಲಿ ಸ್ಥಾಪನೆಯಾಗಿ ಸಂಸ್ಥೆಯು ಕಳೆದ 110 ವರ್ಷಗಳಲ್ಲಿ ಸ್ಥಿರವಾಗಿ ಬೆಳೆದಿದೆ.
ಎಮ್ಸಿಸಿ ಬ್ಯಾಂಕ್ ದಕ್ಷಿಣ ಕನ್ನಡದ ಅವಿಭಜಿತ ಜಿಲ್ಲೆಯಾದ್ಯಂತ 16 ಶಾಖೆಗಳನ್ನು ಹೊಂದಿದ್ದು, ಆಯ್ದ ಶಾಖೆಗಳಲ್ಲಿ ಎಟಿಎಂ ಸೌಲಭ್ಯ ಲಭ್ಯವಿದ್ದು, ಬ್ಯಾಂಕ್ ತನ್ನ ಗ್ರಾಹಕರಿಗೆ ಉಚಿತ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುತ್ತಿದೆ.
ಕೊರೊನಾದ ನಡುವೆಯೂ ಎಮ್ಸಿಸಿ ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೋ ಮತ್ತು ಅವರ ತಂಡದ ಪ್ರಾಮಾಣಿಕ ಪ್ರಯತ್ನದಿಂದ ಮಾರ್ಚ್ 31, 2022 ರಂದು ಕೊನೆಗೊಂಡ ವರ್ಷದ ಆರ್ಥಿಕ ಅಂಕಿಅಂಶಗಳು ಉತ್ತಮ ಲಾಭವನ್ನು ದಾಖಲಿಸಿದೆ.
ಕಳೆದ ವರ್ಷ 1.92% ಕ್ಕೆ ಹೋಲಿಸಿದರೆ ಎನ್ಪಿಎ 1.50% ಕ್ಕೆ ಇಳಿದಿದೆ, ಲಾಭವು ಕಳೆದ ವರ್ಷ 5.96 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ 9.01 ಕೋಟಿ ರೂ. ಲಾಭವಾಗಿದೆ. ಠೇವಣಿಗಳು ಕಳೆದ ವರ್ಷ 456 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 532 ಕೋಟಿ ರೂಪಾಯಿಗಳ ಬೆಳವಣಿಗೆಯನ್ನು ದಾಖಲಿಸಿವೆ ಮತ್ತು ಬಂಡವಾಳವು ಕಳೆದ ವರ್ಷ 527 ಕೋಟಿ ರೂಪಾಯಿಗಳಿಂದ ಈ ವರ್ಷ 620 ಕೋಟಿ ರೂಪಾಯಿಗಳಿಗೆ ಬೆಳೆದಿದೆ.
ಈ ಕುರಿತು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಸಂಸ್ಥೆಯ ಮೇಲಿನ ನಂಬಿಕೆ ಮತ್ತು ಪ್ರಸ್ತುತ ಆಡಳಿತಕ್ಕೆ ನಿರಂತರ ಬೆಂಬಲ ನೀಡಿದ ಷೇರುದಾರರು ಮತ್ತು ಗ್ರಾಹಕರಿಗೆ ಕೃತಜ್ಞತೆಗಳು. ನಮ್ಮ ಬ್ಯಾಂಕ್ ನ ತಂಡದ ಅತ್ಯುತ್ತಮ ಪ್ರಯತ್ನಗಳಿಂದ ಈ ಬಾರಿ ಹೆಚ್ಚಿನ ಲಾಭಗಳಿಸಿದೆ ಮತ್ತು ಮುಂದೆಯೂ ಇದೇ ರೀತಿಯ ಕೆಲಸಗಳು ನಡೆಯುತ್ತದೆ ಎಂದರು.
ಇನ್ನು ಬ್ಯಾಂಕ್ನ ಬೆಳವಣಿಗೆಯನ್ನು ಸಹಿಸಲಾಗದೇ ಒಬ್ಬ ಸದಸ್ಯ ಹಲವಾರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ನಮ್ಮ ಬ್ಯಾಂಕಿನ ಬಗ್ಗೆ ನಿರಂತರ ಸುಳ್ಳು
ವದಂತಿಗಳನ್ನು ಹಬ್ಬಿಸುತ್ತಿದ್ದಾನೆ. ಈತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮಂಗಳೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್ 500 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ನಾವು ಪ್ರಜಾಪ್ರಭುತ್ವ ದೇಶದಲ್ಲಿ ವಾಸಿಸುತ್ತಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ವದಂತಿಗಳನ್ನು ಹರಡುವ ಮೂಲಕ ಸಂಸ್ಥೆಗೆ ಹಾನಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅನಿಲ್ ಲೋಬೋ ಹೇಳಿದ್ದಾರೆ.
ಇನ್ನು ಎಮ್ಸಿಸಿ ಬ್ಯಾಂಕ್ನ ಷೇರುದಾರರು ಮತ್ತು ಗ್ರಾಹಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ನಿಯಮಿತ ಅಪ್ಡೇಟ್ಗಳಿಗಾಗಿ ಬ್ಯಾಂಕ್ನ ಅಧಿಕೃತ ವೆಬ್ಸೈಟ್ www.mccbank.in ಅನ್ನು ಅನುಸರಿಸಿ ಎಂದು ಸದಸ್ಯರು ಮತ್ತು ಗ್ರಾಹಕರಿಗೆ ಮನವಿ ಮಾಡಿಕೊಂಡಿದ್ದಾರೆ.