ಬಂಟ್ವಾಳ, ಏ 03 (DaijiworldNews/DB): ಗ್ರಾಮದ ಜನರು ಒಗ್ಗೂಡಿ ಸಾರ್ವಜನಿಕರ ಪ್ರೋತ್ಸಾಹದೊಂದಿಗೆ ಕೆಲಸ ಮಾಡಿದರೆ ಯಾವುದೇ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತದೆ ಎಂಬುದಕ್ಕೆ ಬಂಟ್ವಾಳದ ಗ್ರಾಮವೊಂದರಲ್ಲಿ ನಿರ್ಮಾಣವಾದ ಈ ರಸ್ತೆಯೇ ಸಾಕ್ಷಿ. ಯಾವ ದೊಡ್ಡ ಪಟ್ಟಣಗಳಿಗೂ ಕಮ್ಮಿ ಇಲ್ಲ ಎಂಬಂತೆ ಸರ್ವ ಸೌಕರ್ಯಗಳೊಂದಿಗೆ ರಸ್ತೆ ನಳನಳಿಸುತ್ತಿದೆ.
ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಸಜಿಪಮೂಡದಿಂದ ಮಿತ್ತಮಜಲು ದೇವಳ ತನಕದ 1.5 ಕಿಮೀ ಉದ್ದಕ್ಕೆ ನಿರ್ಮಾಣಗೊಂಡಿರುವ ಈ ರಸ್ತೆಗೆ ಸ್ಥಳೀಯರೇ ನಿರ್ಮಾತೃಗಳು. ರಸ್ತೆಯ ಎರಡೂ ಬದಿಯಲ್ಲಿ ಪಾದಚಾರ ಮಾರ್ಗ, ಮಾರ್ಗದುದ್ದಕ್ಕೂ ಸೋಲಾರ್ ಬೀದಿದೀಪಗಳು, ಎರಡೂ ಬದಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ. 2.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆಯನ್ನು ಗ್ರಾಮೀಣಾಭಿವೃದ್ದಿ ಸಚಿವ ಕೆ. ಎಸ್. ಈಶ್ವರಪ್ಪ ಭಾನುವಾರ ಉದ್ಘಾಟಿಸಿದರು.
ಕಾಂಕ್ರಿಟೀಕೃತ ರಸ್ತೆಯಾಗಿದ್ದು, ರಸ್ತೆ ನಿರ್ಮಾಣದ ಉದ್ದೇಶದಿಂದ ಯಾವುದೇ ಗೊಂದಲ ಮಾಡದೆ ಗ್ರಾಮಸ್ಥರು ಸರ್ಕಾರಕ್ಕೆ ಜಾಗ ಬಿಟ್ಟುಕೊಟ್ಟಿದ್ದರು. ಎರಡೂ ಬದಿಯ ಪಾದಚಾರಿ ಮಾರ್ಗಗಳಿಗೆ ಆಕರ್ಷಕ ಇಂಟರ್ ಲಾಕ್ ನ್ನು ಅಳವಡಿಸಲಾಗಿದೆ. ಸೋಲಾರ್ ಲೈಟ್ ಗಳು ಕತ್ತಲಾಗುತ್ತಿದ್ದಂತೆ ತನ್ನಷ್ಟಕ್ಕೆ ಬೆಳಗುವ ವ್ಯವಸ್ಥೆಯನ್ನು ಹೊಂದಿದೆ. ಸಜಿಪಮೂಡ ಸಿಟಿಜನ್ಸ್ ವೆಲ್ಫೇರ್ ಕಮಿಟಿಯ ಸಂಯೋಜಕ ವಿವೇಕ್ ಶೆಟ್ಟಿ ಅವರ ನಿರ್ದೇಶನದಂತೆ ಗ್ರಾಮಸ್ಥರು ರಸ್ತೆಯ ನಿರ್ವಹಣೆಯನ್ನು ಮಾಡಲಿದ್ದಾರೆ.
ರಸ್ತೆ ಸುಂದರೀಕರಣಗೊಳಿಸಲು ಎರಡೂ ಬದಿಗಳಲ್ಲಿ ಗಿಡಗಳನ್ನು ನೆಡುವ ಸಲುವಾಗಿ ಈಗಾಗಲೇ ಹೊಂಡಗಳನ್ನು ಮಾಡಲಾಗಿದೆ. ಮಳೆಗಾಲದಲ್ಲಿ ಗಿಡ ನೆಡಲು ಉದ್ದೇಶಿಸಲಾಗಿದೆ. ರಸ್ತೆ ನಿರ್ಮಾಣಕ್ಕಿಳಿಯುವ ವೇಳೆ 15 ಲಕ್ಷ ರೂ. ಅಂದಾಜು ವೆಚ್ಚವನ್ನು ನಿಗದಿಗೊಳಿಸಲಾಗಿತ್ತು. ಆದರೆ ಬಳಿಕ ಶಾಸಕ ರಾಜೇಶ್ ಉಳಿಪಾಡಿಗುತ್ತು ಅವರ ಸಹಕಾರದೊಂದಿಗೆ 2.5 ಕೋಟಿ ರೂ. ವೆಚ್ಚದಲ್ಲಿ ಮಾದರಿ ರಸ್ತೆಯಾಗಿ ರೂಪ ತಳೆದಿದೆ.