ಕುಂದಾಪುರ, ಏ 03 (DaijiworldNews/HR): ಪಂಚ ರಾಜ್ಯ ಚುನಾವಣೆ ಮುಗಿದ ಬಳಿಕ ಮಾರ್ಚ್ 22 ರ ನಂತರ 12 ದಿನಗಳಲ್ಲಿ ಸತತ 10 ಬಾರಿ ಪೆಟೋಲ್ ಮತ್ತು ಡೀಸೆಲ್ ಬೆಲೆ ಎರಿಸಿರುವುದರಿಂದ ತೈಲ ಬೆಲೆ ಲೀಟರ್ ಗೆ 7 ರೂಪಾಯಿ ಹೆಚ್ಚಳವಾಗಿದ್ದು ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು ಸರಕಾರ ಕೂಡಲೇ ತೈಲ ಬೆಲೆ ಇಳಿಸಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 250 ರೂಪಾಯಿ ಹೆಚ್ಚಳ ಮಾಡಿರುವುದರಿಂದ ಹೋಟೆಲ್ ಮತ್ತು ವಾಣಿಜ್ಯ ಮಾಲಿಕರಿಗೆ ತೀವ್ರ ಹೊಡೆತ ಬಿದ್ದಿದ್ದು, ಇದರಿಂದ ನೇರ ಗ್ರಾಹಕರ ಮೇಲೆ ಬೆಲೆ ಏರಿಕೆ ಬಿಸಿ ಪ್ರಾರಂಭವಾಗಲಿದೆ.
ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲಾ ಸರಕುಗಳ ಬೆಲೆ ಪುನಃ ಹೆಚ್ಚಳವಾಗಲು ಪ್ರಾರಂಭವಾಗಿದ್ದು ಇದರಿಂದ ಶ್ರೀ ಸಾಮಾನ್ಯನಿಗೆ ಬಾರಿ ಹೊಡೆತ ಬೀಳಲಿದೆ.
ಹಿಂದೆ ಯುಪಿಎ ಸರಕಾರವಿದ್ದಾಗ ತೈಲ ಬೆಲೆ 10 ರಿಂದ 20 ಪೈಸೆ ಎರಿದಾಗ ಗ್ಯಾಸ್ ಸೆಲೆಂಡರ್ ದರ 5 ರೂಪಾಯಿ ಹೆಚ್ಚಳವಾದಾಗ ರಸ್ತೆಗಿಳಿದು ಪ್ರತಿಭಟನೆ ಮಾಡಿದ ಬಿಜೆಪಿ ಮುಖಂಡರು ಈಗ ಮೌನಕ್ಕೆ ಶರಣಾಗಲು ಕಾರಣ ಏನು ಎಂದು ಪ್ರಶ್ನಿಸಿದ್ಧಾರೆ.
ಲಾಕ್ ಡೌನ್ನಿಂದ ಹೈರಾಗಾಗಿರುವ ಜನರ ಪರ ನಿಲ್ಲಬೇಕಾದ ಸರಕಾರ ಬೆಲೆ ಏರಿಕೆಯಿಂದ ಜನರ ಮನಸನ್ನು ಬೇರೆಡೆ ಸೆಳೆಯಲು ಬೇರೆ ಬೇರೆ ಸಂಘಟನೆಗಳನ್ನು ಉಪಯೋಗಿಸಿಕೊಂಡು ಜಾತಿ ಮತ್ತು ಧರ್ಮಗಳ ಮದ್ಯೆ ವಿಷ ಬೀಜ ಬಿತ್ತಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ತಿಳಿಸಿದ ಅವರು ದೇಶದಲ್ಲಿ ಕಳೆದ 7 ವರ್ಷದಿಂದ ಬಿಜೆಪಿಗೆ ನಿರಂತರ ಬೆಂಬಲ ನೀಡಿದ ಜನತೆ ಪರವಾಗಿ ಬಿಜೆಪಿ ಸರಕಾರ ನಿಂತು ಕೂಡಲೇ ತೈಲ ಬೆಲೆ ಇಳಿಸಬೇಕೆಂದು ಆಗ್ರಹಿಸಿದ್ದಾರೆ.