ಬೆಳ್ತಂಗಡಿ, ಏ 02 (DaijiworldNews/DB): ಜನವರಿಯಲ್ಲಿ ನಾಪತ್ತೆಯಾಗಿದ್ದ ಕಾರ್ಮಿಕನೊಬ್ಬನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಬೆಳ್ತಂಗಡಿಯ ಸರಕಾರಿ ಮೈದಾನದಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಲಿಂಗ ಶೆಟ್ಟಿ (43) ಎಂದು ಗುರುತಿಸಲಾಗಿದೆ. ಈತ ಮೈಸೂರಿನ ಕೆ.ಆರ್. ನಗರ ಮೂಲದವರಾಗಿದ್ದು, ಬೆಳ್ತಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ.
ಬೆಳ್ತಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಲಿಂಗ ಕೆಲ ತಿಂಗಳ ಹಿಂದೆ ಯುವತಿಯೋರ್ವಳೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಇದು ಆತನ ಕುಟುಂಬದವರಿಗೆ ಗೊತ್ತಾಗಿತ್ತು. ಇದರಿಂದ ನೊಂದ ಆತ ಆತ್ಮಹತ್ಯೆಗೆ ಯತ್ನಿಸಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆಯ ಬಳಿಕ ಮತ್ತೆ ಮನೆಗೆ ಆಗಮಿಸಿದ್ದ. ಆದರೆ ಸ್ವಲ್ಪ ಸಮಯದ ಬಳಿಕ ನಾಪತ್ತೆಯಾಗಿದ್ದ.
ಆತ ನಾಪತ್ತೆಯಾಗಿರುವ ಸಂಬಂಧ ಯಾರೂ ದೂರು ದಾಖಲಿಸಿರಲಿಲ್ಲ. ಇದೀಗ ಆತನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಟ್ಟೆ, ಐಡಿ ಕಾರ್ಡ್, ಚಪ್ಪಲಿ ಮತ್ತು ನಗದು ಮೃತದೇಹ ಇದ್ದ ಜಾಗದಲ್ಲಿ ಲಭ್ಯವಾಗಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಲಿದ್ದಾರೆ.