ಬೆಳ್ತಂಗಡಿ,ಡಿ 25 (MSP): ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ಗ್ರಾಮಕರಣಿಕನ ಮೇಲೆ ಅಕ್ರಮ ಮರಳು ದಂಧೆಕೋರರು ಟಿಪ್ಪರ್ ಹತ್ತಿಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ರಾಜ್ಯಗ್ರಾಮ ಲೆಕ್ಕಾಧಿಕಾರಿಗಳ ಸಂಘವು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳ್ತಂಗಡಿ ತಾಲೂಕಿನ ಗ್ರಾಮ ಕರಣಿಕರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಹಾಗೂ ಪ್ರತಿ ಗ್ರಾಮಗಳಲ್ಲೂ ಕರ್ತವ್ಯ ನಿರ್ವಹಿಸುವವರೂ ಸೇರಿದಂತೆ ತಾಲೂಕಿನ 42 ಮಂದಿ ಗ್ರಾಮಕರಣಿಕರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ ತಾಲೂಕು ಕಚೇರಿಯಲ್ಲಿ ಬಹುತೇಕ ಅರ್ಜಿ ಸ್ವೀಕಾರ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಅರ್ಜಿ ಕಿಯೋಸ್ಕ್ನಲ್ಲಿ ಮುಷ್ಕರ ನಡೆಯುತ್ತಿದೆಎಂದು ಫಲಕ ಅಳವಡಿಸಲಾಗಿತ್ತು.
ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳಿಗೆ ವಿಎಗಳನ್ನು ನಿಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ವಿಎಗಳು ಕುಳಿತುಕೊಳ್ಳುವ ಸ್ಥಳಗಳು ಸಂಪೂರ್ಣ ಖಾಲಿ ಖಾಲಿಯಾಗಿತ್ತು. ಅಟಲ್ಜೀ ಕೇಂದ್ರ, ಭೂಮಿ ಶಾಖೆ, 94ಸಿ, ಅಕ್ರಮ ಸಕ್ರಮಕ್ಕೆ ಸಂಬಂಧಪಟ್ಟಂತೆ ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 10 ಮಂದಿ ಮತ್ತು ವಿವಿಧ ಗ್ರಾಮಗಳಲ್ಲಿ ಕೆಲಸ ಮಾಡುವ 33 ಮಂದಿ ಸೇರಿ 42 ಮಂದಿ ಗ್ರಾಮಕರಣಿಕರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಬಹುತೇಕ ಕೆಲಸ ಕಾರ್ಯಗಳು ಸೋಮವಾರ ಸ್ಥಗಿತಗೊಂಡಿದ್ದು, ಜನರು ಕೊಂಚ ತೊಂದರೆ ಅನುಭವಿಸುವಂತಾಗಿತ್ತು.