ಕುಂದಾಪುರ,ಏ 02 (DaijiworldNews/MS): ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ಸಿನವರಿಗೆ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ನೀರಾವರಿ, ಬೆಲೆ ಏರಿಕೆ ಎಲ್ಲಾ ನೆನಪಾಗುತ್ತದೆ. ಅದೇ ಕಾರಣಕ್ಕಾಗಿ ಇದೀಗ ಬೆಲೆ ಏರಿಕೆಯ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದ್ದಾರೆ.
ಶುಕ್ರವಾರ ಕುಂದಾಪುರದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಸಾಮಾನ್ಯ. ಆದರೆ ಪ್ರತಿಭಟನೆ, ಟೀಕೆ ಯಾವ ವಿಚಾರಕ್ಕೆ ಮಹತ್ವ ನೀಡಬೇಕು ಹಾಗೂ ಸ್ಪಂದಿಸಬೇಕು ಎನ್ನುವ ಪರಿಶೀಲನೆ ನಡೆಸಿ ಸತ್ಯಾಂಶದ ಮೇಲೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಚುನಾವಣೆಗಾಗಿಯೇ ಕಾಂಗ್ರೆಸ್ ಇಂತಹ ಚಟುವಟಿಗಳು ನಡೆಸುತ್ತದೆ ಎನ್ನುವ ಅರಿವು ಜನರಿಗೆ ಇರುವುದರಿಂಸ ಕಾಂಗ್ರೆಸ್ ಪ್ರತಿಭಟನೆಗೆ ಜನರು ಹೆಚ್ಚಿನ ಮಹತ್ವ ನೀಡೋದಿಲ್ಲ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಕಾನೂನು ಹಾಗೂ ಮಸೂದೆಯ ಬಗ್ಗೆ ಸದನದಲ್ಲಿಯೇ ಸರ್ಕಾರ ಸ್ವಷ್ಟನೆ ನೀಡಿದೆ. ಸಮಸ್ಯೆಗಳು ಪರಿಹಾರವಾಗಿ ರಾಜ್ಯದಲ್ಲಿ ಎಲ್ಲರೂ ಕಾನೂನು ಚೌಕಟ್ಟಿನ ಒಳಗೆ ಸಾಮರಸ್ಯದಿಂದ ಇರಬೇಕು ಎನ್ನುವ ಇಚ್ಛೆ ಸರ್ಕಾರಕ್ಕೆ ಇದೆ ಎಂದು ಸಚಿವರು ಹೇಳಿದರು.