ಪುತ್ತೂರು, ಏ 1 (DaijiworldNews/HR): ಸಂಘ ಪರಿವಾರದವರು ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ, ಅವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಡಿ ಎಂದ ಮಾತ್ರಕ್ಕೆ ಮುಸ್ಲಿಮರು ಹಸಿದುಕೊಳ್ಳುವುದಿಲ್ಲ. ಅವರ ಹೊಟ್ಟೆ ತುಂಬಿಸುವ ಯೋಗ್ಯತೆ ಮುಸ್ಲಿಂ ಸಮುದಾಯದ ಶ್ರೀಮಂತರಿಗಿದೆ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಹೇಳಿದರು.
ರಾಜ್ಯ ಸರ್ಕಾರದ ಅರಾಜಕತೆ ನೀತಿಯನ್ನು ವಿರೋಧಿಸಿ ಪುತ್ತೂರು ತಾಲ್ಲೂಕು ಆಡಳಿತ ಸೌಧದ ಎದುರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಎಸ್ಡಿಪಿಐ ವತಿಯಿಂದ ಶುಕ್ರವಾರ ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಘ ಪರಿವಾರದ ಯಾರೆಲ್ಲ ಚಿನ್ನದಂಗಡಿ, ಅಂಗಡಿ ಇಟ್ಟುಕೊಂಡಿದ್ದಾರೆ ಎಂಬ ಪಟ್ಟಿಯನ್ನು ನಾವು ಮಾಡಿ ಮುಸ್ಲಿಂ ಸಮುದಾಯಕ್ಕೆ ರವಾನಿಸಿದರೆ ಅವರ ಅಂಗಡಿಗೆ ಬೀಗ ಹಾಕಬೇಕಾಗಿ ಬರಬಹುದು. ಆದರೆ ನಾವು ಅಂತಹ ಕೆಲಸ ಮಾಡುವುದಿಲ್ಲ. ರಾಜ್ಯ ಸರ್ಕಾರದ ತಾರತಮ್ಯ ಅಜೆಂಟಾಗಳ ವಿರುದ್ಧ ಬಹಿರಂಗ ಹೋರಾಟಕ್ಕೆ ನಾವು ಸಿದ್ಧರಾಗಿದ್ದೇವೆ ಎಂದರು.
ಪ್ರತಿಭಟನಾ ಸಭೆಗೆ ಮೊದಲು ದರ್ಬೆ ವೃತ್ತದಿಂದ ಮುಖ್ಯ ರಸ್ತೆಯಾಗಿ ಪುತ್ತೂರು ತಾಲ್ಲೂಕು ಆಡಳಿತ ಸೌಧದ ಎದುರಿನ ಸ್ಥಳಕ್ಕೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಎಸ್ಡಿಪಿಐ ಮುಖಂಡರಾದ ಶಾಫಿ ಬೆಳ್ಳಾರೆ, ಇಬ್ರಾಹಿಂ ಸಾಗರ್, ಮತ್ತಿತರರು ಇದ್ದರು.
ಪ್ರತಿಭಟನೆಗಾರರು ಪ್ರತಿಭಟನೆ ನಡೆಸಲು ಅನುಮತಿ ಪಡೆದುಕೊಂಡಿದ್ದರೂ ಧ್ವನಿವರ್ಧಕ ಬಳಸಲು ಅನುಮತಿ ಪಡೆದುಕೊಂಡಿಲ್ಲ ಎಂಬ ಕಾರಣಕ್ಕಾಗಿ ನಗರ ಠಾಣೆಯ ಪೊಲೀಸರು ಪ್ರತಿಭಟನಾ ಭಾಷಣ ನಡೆಯುತ್ತಿದ್ದ ವೇಳೆ ಧ್ವನಿವರ್ಧಕ ಸ್ಥಗಿತಗೊಳಿಸುಂತೆ ಸೂಚನೆ ನೀಡಿದರು.
ಪೊಲೀಸರ ಸೂಚನೆಯನ್ನು ಪರಿಗಣಿಸದೆ ಮತ್ತೆ ಭಾಷಣ ಮುಂದುವರಿದಾಗ ಸ್ವತಹಃ ಪೊಲೀಸರೇ ಕಾರ್ಯಪ್ರವೃತ್ತರಾಗಿ ಮೈಕ್ ಸ್ಥಗಿತಗೊಳಿಸಿದರು. ಈ ವೇಳೆ ಪ್ರತಿಭಟನಾ ನಿರತ ಎಸ್ಡಿಪಿಐ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ ಮೈಕ್ ಇಲ್ಲದೆಯೇ ಕೆಲ ಹೊತ್ತು ಭಾಷಣ ಮುಂದುವರಿಸಿ ಪ್ರತಿಭಟನೆ ಕೊನೆಗೊಳಿಸಲಾಯಿತು. ಆ ಬಳಿಕ ಪೊಲೀಸರು ಧ್ವನಿವರ್ಧಕ ಸಹಿತ ಅದನ್ನು ಅಳವಡಿಸಿದ್ದ ಜೀಪನ್ನು ಠಾಣೆಗೆ ಕೊಂಡೊಯ್ದರು.
ಇನ್ನು ಪ್ರತಿಭಟನೆಗೆ ನಾವು ಅನುಮತಿ ಕೇಳಿದ್ದೆವು. ಪೊಲೀಸರು ಮೌಖಿಕ ಅನುಮತಿಯನ್ನೂ ನೀಡಿದ್ದರು ಎಂದು ಶಾಫಿ ಬೆಳ್ಳಾರೆ ತಿಳಿಸಿದ್ದಾರೆ.