ಮಂಗಳೂರು, ಏ 1 (DaijiworldNews/HR): ಸಂವಿಧಾನ ಪೀಠಿಕೆಯ ಫೋಟೋವನ್ನು ಮನೆಯ ಕೊಠಡಿಗಳಲ್ಲಿ ಹಾಕಿಕೊಂಡರೆ ರಾಷ್ಟ್ರದ ಮೇಲಿನ ಜವಾಬ್ದಾರಿಯ ಅರಿವು ಹೆಚ್ಚಾಗುತ್ತದೆ, ಆ ಮೂಲಕ ದೇಶವನ್ನು ಮತ್ತಷ್ಟು ಸದೃಢಗೊಳಿಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಎಸ್ಡಿಎಂ ಕಾಲೇಜು, ಜಿಲ್ಲಾ ವಾಣಿಜ್ಯೋದ್ಯಮ ಸಂಘ ಹಾಗೂ ವಿಶ್ವವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಏ.1ರ ಶುಕ್ರವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಕ್ರಮ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಪ್ರಜೆಗಳಾದ ನಾವು ನಮ್ಮ ದೇಶವನ್ನು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾವ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರಚಿಸಲು ಮತ್ತು ಸಮಸ್ತ ನಾಗರಿಕರಿಗೆ ನ್ಯಾಯ, ಸ್ವಾತಂತ್ರ ಮತ್ತು ಸಮಾನತೆ, ಭಾತೃತ್ವವನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕವಾಗಿ ಸಂಕಲ್ಪ ಮಾಡಿ, ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿಸಿ, ನಮಗೆ ನಾವೇ ಅದನ್ನು ಅರ್ಪಿಸಿಕೊಳ್ಳುತ್ತಿದ್ದೇವೆ ಎಂಬುದು ಸಂವಿಧಾನದ ಪೀಠಿಕೆಯಲ್ಲಿದೆ, ಅದನ್ನು ಓದಿ ಮನನ ಮಾಡಿಕೊಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಅವರು ಕಿವಿ ಮಾತು ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿರುವ ನಾವು ಇತಿಹಾಸವನ್ನು ಅವಲೋಕಿಸಿದರೆ ಹೆಮ್ಮೆಯ ಭಾವ ಮೂಡುತ್ತದೆ, ಏಕೆಂದರೆ ಭಾರತವಿಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಇತರೆ ದೇಶಗಳಿಗೆ ಸರಿಸಮಾನವಾಗಿ ಬೆಳೆದು ನಿಂತಿದೆ, ಈ ಪ್ರಗತಿಗೆ ಪ್ರಮುಖ ಕಾರಣ ಭಾರತೀಯ ಸಂವಿಧಾನವಾಗಿದೆ ಎಂಬುದು ಅತಿಶಯೋಕ್ತಿಯಲ್ಲ, ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಸಿದ್ದಗೊಂಡ ಭಾರತೀಯ ಸಂವಿಧಾನ ಅವೆಲ್ಲವನ್ನೂ ಸಾಧಿಸುವಲ್ಲಿ ಬಲಿಷ್ಠವಾಗಿದೆ ಎಂದರು.
ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅತ್ಯಂತ ಸಮರ್ಥವಾಗಿ ಅನುಷ್ಠಾನಕ್ಕೆ ತಂದ ದೇಶ ಭಾರತ, ಸಾಮಾನ್ಯ ವ್ಯಕ್ತಿಗಳನ್ನು ಅಸಾಮಾನ್ಯನನ್ನಾಗಿ ಮಾಡುವ ಅವಕಾಶ ಹಾಗೂ ಶಕ್ತಿ ಸಂವಿಧಾನ ನೀಡಿದೆ, ಸಾಮಾನ್ಯ ನಾಗರೀಕರೂ ಕೂಡ ಈ ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ಇತರೆ ಜನಪ್ರತಿನಿಧಿಯಾವುದರ ಹಿಂದೆ ಸಂವಿಧಾನದ ಶ್ರೇಷ್ಠತೆ ಅಡಗಿದೆ, ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ ಪ್ರಸ್ತಾವನೆಯನ್ನು ಅರ್ಥ ಮಾಡಿಕೊಳ್ಳಬೇಕು, ದೇಶದ ಇತಿಹಾಸ ಹಾಗೂ ಸಂವಿಧಾನದ ಅರಿವು, ಯುವಜನರಲ್ಲಿ ಉಂಟಾದಾಗ ದೇಶದ ಪ್ರಗತಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.
ಜಾತಿ, ಭಾಷೆ, ವೇಷ, ಆಹಾರ, ಗಡಿ, ನೀರಿನ ಕಾರಣದಿಂದ ಕಂದಕಗಳು ನಿರ್ಮಾಣವಾಗಿರುವುದು ವಿಪರ್ಯಾಸ, ಇಂತಹ ವಿಷ ವರ್ತುಲದಿಂದ ಹೊರಬರಲು ಉತ್ತಮ ವಿಚಾರ, ಚಿಂತನೆ, ಜವಬ್ದಾರಿಯಿಂದ ಸಾಧ್ಯ, ಜನಸಮೂಹದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು, ಎಲ್ಲಾ ರಂಗಗಳಲ್ಲಿಯೂ ಚುನಾವಣೆ ಸುಧಾರಣೆಯಾಗಬೇಕಿದೆ, ಹಣಬಲ, ಜಾತಿಬಲ, ಪಕ್ಷಾಂತರ ಬಲಗಳಿಂದ ಚುನಾವಣೆಗಳು ಮೌಲ್ಯ ಕಳೆದುಕೊಳ್ಳುತ್ತಿವೆ, ಇವುಗಳನ್ನು ಸುಸ್ಥಿತಿಗೆ ತರಲು ಜನರು ಆಮಿಷಗಳನ್ನು ತೊರೆದು ನನ್ನ ಮತ ಮಾರಾಟಕ್ಕಿಲ್ಲ ಎಂಬ ಜನಾಂದೋಲನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಚುನಾವಣೆಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ಭಾಗವಿದೆ, ಅದೊಂದು ರೀತಿಯ ಹಬ್ಬ, ಸಂಭ್ರಮವಿದ್ದಂತೆ, ಆದರೆ ಚುನಾವಣೆಗಳು ಎಲ್ಲಾ ವ್ಯವಸ್ಥೆ, ಮೌಲ್ಯಗಳ ಆದರ್ಶಗಳ ಅಧಃಪತನಕ್ಕೆ ಕಾರಣವಾಗುತ್ತಿದೆ. ಜನಸಮೂಹದ ಭಾವನೆಗಳನ್ನು ಅರಿತು ಆಡಳಿತಗಾರರು ತಮ್ಮ ನೀತಿ ನಿರೂಪಣೆ ಮಾಡುತ್ತಾರೆ. ಜಾಗೃತ ಸಮಾಜವಾಗಿ ನಾವು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸಶಕ್ತ ಸಮಾಜ ಆಗಬೇಕು. ಸಮಾಜ ತನ್ನ ಶಕ್ತಿ ಕಳೆದುಕೊಳ್ಳದೆ, ಜಾಗೃತ ಸ್ಥಿತಿಯಲ್ಲಿ ಆಗುಹೋಗುಗಳಿಗೆ ಪ್ರತಿಕ್ರಿಯಿಸಲು ಸಂವಿಧಾನಬದ್ಧ ವ್ಯವಸ್ಥೆ ಇದೆ. ಆ ಜವಾಬ್ದಾರಿಯನ್ನು ನಿರ್ವಹಿಲು ಸಮಾಜ ಕಾರಣವಾಗಬೇಕು. ಆ ನಿಟ್ಟಿನಲ್ಲಿ ಚುನಾವಣೆಯ ವ್ಯವಸ್ಥೆಯ ಸುಧಾರಣೆಯ ಕ್ರಮವಾಗಿ ಸಂವಾದವನ್ನು ನಡೆಸಲಾಗುತ್ತಿದೆ. ಶಾಲಾ ಎಸ್ಡಿಎಂಸಿಯಿಂದ ಹಿಡಿದು ಲೋಕಸಭೆಯವರೆಗಿನ ಚುನಾವಣೆಯವರೆಗೂ ಸುಧಾರಣೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಸಂವಾದದಲ್ಲಿ ವಿದ್ಯಾರ್ಥಿಗಳಾದ ವಿದ್ವತ್ ಶೆಟ್ಟಿ, ಶಿವಶಂಕರ್, ಗುರನಾಥ ಚೌಹಾಣ್, ಶ್ರೀವರ, ನೇಹಾ ಎನ್. ಪೂಜಾರಿ, ಸಹನಾ ಜಯಪ್ರಕಾಶ್, ಅಯಾಝ್, ಮೈಬುನ್ನಿಸಾ ಹಾಗೂ ಇತರೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕರಾದ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ದಿನೇಂದ್ರಕುಮಾರ್, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ತಾರಾನಾಥ್, ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯರಾಜ್ ಅಮೀನ್, ಚೇಂಬರ್ ಆಫ್ ಕಾಮರ್ಸ್ನ ಸಿಇಒ ಮೈತ್ರಿ ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು.