ಉಡುಪಿ,ಡಿ 25 (MSP): ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆ ತೆರಳಿದ್ದ 8 ಮೀನುಗಾರರು ಇದ್ದ ಸುವರ್ಣ ತ್ರಿಭುಜ ಬೋಟು ನಾಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆ ಶೋಧ ಮುಂದುವರಿಸಿದೆ. ಆದರೂ ಇಲ್ಲಿಯವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಕುಟುಂಬದವರಲ್ಲಿ ಆತಂಕ ಮಡುಗಟ್ಟಿದೆ.
ಡಿ. 13 ರಿಂದ ರಾತ್ರಿ 11 ಗಂಟೆಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಬೋಟ್ ಡಿ.15 ರ ತಡ ರಾತ್ರಿಯಿಂದ ಸಂಪರ್ಕಕ್ಕೆ ಸಿಕ್ಕಿಲ್ಲ . ಸಾಮಾನ್ಯವಾಗಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದರೆ ವಾಪಾಸ್ ಬರಲು 9ರಿಂದ 11 ದಿನ ತೆಗೆದುಕೊಳ್ಳುತ್ತದೆ. ಅದರೆ ಸೋಮವಾರಕ್ಕೆ 12 ದಿನಗಳಾಗಿದ್ದು ,ಮನೆಮಂದಿ ಆತಂಕಿತರಾಗಿದ್ದಾರೆ. ಅಪಘಾತವಾಗಿದ್ದರೆ ಯಾವುದಾದರೂ ಕುರುಹು ಸಿಗಬೇಕಿತ್ತು. ಆದರೆ ಕರಾವಳಿ ಕಾವಲು ಪಡೆಗೆ ಯಾವುದೇ ಕುರುಹು ಸಿಕ್ಕಿಲ್ಲ. ಮೀನುಗಾರರು ದಿಕ್ಕುತಪ್ಪಿ ಸಮುದ್ರದಲ್ಲಿ ಅಲೆಯುತ್ತಿರಬಹುದು. ಕೂಡಲೇ ಅವರನ್ನು ರಕ್ಷಿಸಿ ಕರೆತರಬೇಕು ಎಂದು ಮೀನುಗಾರ ಮುಖಂಡರು ಮನವಿ ಮಾಡಿದ್ದಾರೆ.
ಚಂದ್ರಶೇಖರ್ ಕೋಟ್ಯಾನ್ ಮಾಲೀಕತ್ವದ ಸುವರ್ಣ ತ್ರಿಭುಜ ಬೋಟ್ ನಲ್ಲಿ ಡಿ.13ರಂದು ದಾಮೋದರ, ಲಕ್ಷ್ಮಣ, ಸತೀಶ, ರವಿ, ಹರೀಶ, ರಮೇಶ, ಜೋಗಯ್ಯ ಎಂಬುವರು ಮೀನುಗಾರಿಕೆಗೆ ತೆರಳಿದ್ದರು. ಡಿ.15ರ ಮಧ್ಯರಾತ್ರಿವರೆಗೂ ಮೀನುಗಾರರ ಸಂಪರ್ಕದಲ್ಲಿದ್ದ ಬೋಟ್ ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ.
ಮಲ್ಪೆ ಕಡಲ ತೀರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಣ್ಮರೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ವಾಪಾಸಾಗುವಂತೆ ಮೀನುಗಾರರು ಬೇಡಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನಾಪತ್ತೆ ಯಾದ ಮೀನುಗಾರರ ರಕ್ಷಣೆ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ದೂರವಾಣಿ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಜಿಪಿ ನೀಲಮಣಿ ರಾಜು ಅವರೊಂದಿಗೆ ಮಾತನಾಡಿ, ‘ಕಣ್ಮರೆಯಾಗಿರುವ ಮೀನುಗಾರರ ರಕ್ಷಣೆಗೆ ವಿಶೇಷ ಪಡೆ ರಚಿಸಬೇಕು’ ಎಂದು ಮನವಿ ಮಾಡಿದ್ದಾರೆ.