ಕಾರ್ಕಳ, ಏ 1 (DaijiworldNews/HR): ನಿಟ್ಟೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ನೂತನ ಎಂಆರ್ಎಫ್ ಘಟಕ (ಸಮಗ್ರ ಘನತ್ಯಾಜ್ಯ ನಿರ್ವಹಣೆ ಕೇಂದ್ರ) ಎಪ್ರಿಲ್ 3ರಂದು ಲೋಕಾರ್ಪಣೆಗೊಳ್ಳಲಿದೆ.
ಎಂಆರ್ಎಫ್ ಘಟಕವನ್ನು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖಾ ಸಚಿವ ಈಶ್ವರಪ್ಪ ಉದ್ಘಾಟಿಸಲಿದ್ದು, ಕಾರ್ಕಳ ಶಾಸಕ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅಧ್ಯಕ್ಷತೆವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಸಮಾಜ ಕಲ್ಯಾಣಾ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿರುವರು.
ಘನತ್ಯಾಜ್ಯ ನಿರ್ವಹಣಾ ಘಟಕವು ಇಡೀ ದೇಶದಲ್ಲಿಯೇ ಗ್ರಾಮೀಣ ಭಾಗದಲ್ಲಿನ ಪ್ರಥಮ ಘಟಕ ಇದಾಗಿದ್ದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಈ ಘಟಕವು ದಿನಕ್ಕೆ 10 ಟನ್ ತ್ಯಾಜ್ಯ ವಿಲೇವಾರಿ ಮಾಡುವ ಸೌಲಭ್ಯವನ್ನು ಹೊಂದಿದ್ದು ಕಾರ್ಕಳ ಮಾತ್ರವಲ್ಲದೇ ಜಿಲ್ಲೆಯ ಇತರ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯಗಳ ನಿರ್ವಹಣೆ ಇದರಿಂದ ಆಗಲಿದ್ದು ಗ್ರಾಮ ಪಂಚಾಯತ್ಗಳ ತ್ಯಾಜ್ಯ ನಿರ್ವಹಣಾ ಸಮಸ್ಯೆಯು ಬಹುತೇಕ ಪರಿಹಾರ ಕಾಣಲಿದೆ.
3 ವರ್ಷಗಳ ಹಿಂದೆ ಈ ಘಟಕ ಆರಂಭ ಮಾಡಲು ಜಾಗ ಗುರುತಿಸುವ ಸಂದರ್ಭ ಜಿಲ್ಲೆಯ ಬೇರೆ ಬೇರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿದ್ದು ಘಟಕದ ಸ್ಥಾಪನೆಗೆ ಜಮೀನಿನ ಸಮಸ್ಯೆಯು ಬಹುದೊಡ್ಡ ತಲೆನೋವು ಆಗಿತ್ತು. ಆ ಸಂದರ್ಭ ಸಚಿವರಾದಸುನಿಲ್ ಕುಮಾರ್ ರವರು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಮನೆಯ ಹತ್ತಿರದಲ್ಲಿಯೇ ಜಾಗ ಗುರುತಿಸಿ ಘಟಕ ಆರಂಭಿಸಲು ಅನುವು ಮಾಡಿಕೊಟ್ಟಿರುವುದು ಗಮನಾರ್ಹ ಅಂಶ.
ಇನ್ನು ದೇಶದ ಮೊದಲ ಗ್ರಾಮೀಣ ಘಟಕ ನಮ್ಮ ಕ್ಷೇತ್ರದಲ್ಲಿ ಕಾರ್ಯಾರಂಭ ಮಾಡುತ್ತಿರುವುದು ಹೆಮ್ಮೆಯ ವಿಷಯ ಹಾಗೂ ಇಡೀ ದೇಶಕ್ಕೆ ಮಾದರಿ ಎಂದು ಕಾರ್ಕಳ ಸಚಿವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.