ಉಡುಪಿ, ಏ 01 (DaijiworldNews/DB): ರಾಷ್ಟ್ರೀಯ ಹೆದ್ದಾರಿ 169ರ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮಾಳ ಗೇಟ್ ನಿಂದ ಕಾರ್ಕಳ ತನಕದ ರಸ್ತೆ ಚತುಷ್ಪಥಿಕರಣಕ್ಕೆ ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಅನುಮೋದನೆ ನೀಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಾಳ ಗೇಟ್ ನಿಂದ ಕಾರ್ಕಳ ತನಕದ ದ್ವಿಪಥ ರಸ್ತೆಯನ್ನು ಚತುಷ್ಪಥಿಕರಣಗೊಳಿಸಬೇಕೆಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದ್ದೆ. ಇದರ ಪರಿಣಾಮವಾಗಿ ಇದೀಗ 15.27 ಕಿಮೀ ಉದ್ದದ ರಸ್ತೆಯನ್ನು ಚತುಷ್ಪಥೀಕರಣಗೊಳಿಸಲು 177.84 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಅನುಮೋದನೆ ನೀಡಿದೆ ಎಂದವರು ತಿಳಿಸಿದ್ದಾರೆ.
ಶೃಂಗೇರಿ ಚಿಕ್ಕಮಗಳೂರು ಹಾಗೂ ಕಾರ್ಕಳ ಭಾಗದ ಜನರಿಗೆ ಪ್ರಯಾಣಿಸಲು ಈ ರಸ್ತೆ ಬಹಳ ತ್ರಾಸದಾಯಕವಾಗಿತ್ತು. ಇದೀಗ ಮಾರ್ಗವನ್ನು ಚತುಷ್ಪಥಿಕರಣಗೊಳಿಸಲು ಅನುಮೋದನೆ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ವ್ಯಕ್ತಪಡಿಸುತ್ತೇನೆ. ಶೀಘ್ರವೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಯು ಶುರುವಾಗಲಿದೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದ್ದಾರೆ.