ಉಡುಪಿ, ಏ 01 (DaijiworldNews/MS): ಉಡುಪಿ ಜಿಲ್ಲೆಗೆ ಪೂರ್ಣಪ್ರಮಾಣದ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರವನ್ನು ಆಗ್ರಹಿಸಿ ಮನೋವೈದ್ಯರಾದ ಡಾ. ಪಿ ವಿ ಭಂಡಾರಿ ರವರ ಮುಂದಾಳತ್ವದಲ್ಲಿ ಕರಾವಳಿ ಯೂತ್ ಕ್ಲಬ್ ಉಡುಪಿ ತಂಡವು ಏ. 01ರ ಶುಕ್ರವಾರದಂದು ಬೆಳಿಗ್ಗೆ ಮಲ್ಪೆ ಗಾಂಧಿ ಪ್ರತಿಮೆಯಿಂದ ಮಣಿಪಾಲ ಡಿಸಿ ಆಫೀಸ್ ನವರೆಗೆ ಮೌನ ಪಾದಯಾತ್ರೆ ಆರಂಭಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪಿ ವಿ ಭಂಡಾರಿ, "ಇಂದು ಮೂರ್ಖರ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲು ಆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಾಗಿ 22 ವರ್ಷ ಕಳೆದರೂ ಪೂರ್ಣ ಪ್ರಮಾಣದ ಸರಕಾರಿ ಮೆಡಿಕಲ್ ಕಾಲೇಜ್ ತರುವಲ್ಲಿ ಬೇರೆ ಬೇರೆ ಪಕ್ಷದ ಸರಕಾರಗಳು ವಿಫಲವಾಗಿದೆ. ರಾಜಕಾರಣಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮೆರಿಟ್ ಸೀಟ್ ಪಡೆಯಲು ಅರ್ಹ ರಾಗಿದ್ದರೂ ಕೂಡ ಖಾಸಗಿ ಕಾಲೇಜಿನಲ್ಲಿ ಲಕ್ಷ ಲಕ್ಷ ಶುಲ್ಕ ಕಟ್ಟಿ ಕಲಿಯುವಂತಾಗಿದೆ. ಸರಕಾರಿ ಕಾಲೇಜಿನಲ್ಲಾದರೆ ೫೦೦೦೦ ದೊಳಗೆ ಮೆಡಿಕಲ್ ಶಿಕ್ಸಣ ಪಡೆಯಬಹುದು. ಈ ವಿಷಯದಲ್ಲಿ ಯಾವ ರಾಜಕೀಯ ಪಕ್ಷವೂ ನ್ಯಾಯ ದೊರಕಿಸಿ ಕೊಟ್ಟಿಲ್ಲ. ಮೆಡಿಕಲ್ ಕಾಲೇಜ್ ನ್ನು ಖಾಸಗಿ ಸಹಭಾಗಿತ್ವದಲ್ಲಿ ಕಟ್ಟಲು ಹೊರಟ ಸರಕಾರ, ಸರಕಾರವನ್ನೇ ಪಿಪಿಪಿ ಮಾದರಿಗೆ ಬಿಟ್ಟು ಕೊಡಲಿ. ಇದಕ್ಕಾಗಿ ಅನೇಕ ಏಜೆನ್ಸಿಗಳು ತಯಾರಿದೆ' ಎಂದು ಅವರು ವ್ಯಂಗ್ಯವಾಡಿದರು.
50: 50 ಆಧಾರದಲ್ಲಿ ಕಾಲೇಜು ಸ್ಥಾಪನೆ ಬೇಡ, ಅದು ಆಡಳಿತ ನಡೆಸುವಲ್ಲಿ ವಿಫಲ ಆಗುತ್ತದೆ . ಉಡುಪಿಯಲ್ಲಿ ಐದು ಮಂದಿ ಬಿಜೆಪಿ ಶಾಸಕರಿದ್ದರೂ ಉಡುಪಿಗೆ ಮೆಡಿಕಲ್ ಕಾಲೇಜು ತರುವಲ್ಲಿ ಸಂಪೂರ್ಣ ಆಗಿದ್ದಾರೆ. ಹಿಂದೆ ಪಿಪಿಪಿ ಮಾಡೆಲ್ ಆಸ್ಪತ್ರೆ ಕಟ್ಟುವಾಗಲೂ ವಿರೋಧ ಮಾಡಿದ್ದೆ. ಖಾಸಗಿ ಕಂಪನಿಗಳಿಗೆ ಅರೋಗ್ಯ ಕ್ಷೇತ್ರದ ಬಗ್ಗೆ ಮಾಹಿತಿ ಇಲ್ಲ . ಅವರು ಐದು ವರ್ಷ ಬ್ಯುಸಿನೆಸ್ ಮಾಡಿ ಮತ್ತೆ ಆಡಳಿತ ನಡೆಸಲು ಕೈಚೆಲ್ಲುತ್ತಾರೆ. ಈಗ ಪ್ರತಿಭಟನೆಯಲ್ಲಿ ಕಡಿಮೆ ಮಂದಿ ಇದ್ದರು ಕೂಡ ಮುಂದೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ, ಎಂದು ಪಿ ವಿ ಭಂಡಾರಿಯವರು ಸರಕಾರವನ್ನು ಎಚ್ಚರಿಸಿದರು.
ಕರಾವಳಿ ಯೂತ್ ಕ್ಲಬ್ ನ ಅಧ್ಯಕ್ಷ ಅಶೋಕ್ ಮಾತನಾಡಿ, " ಉಡುಪಿ ಬುದ್ಧಿವಂತರ ಜಿಲ್ಲೆ. ಆದರೆ ನಾವು ಮೂರ್ಖರು. 22 ವರ್ಷಗಳ ನಂತರ ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿತು . ಮೂಲಭೂತ ಸೌಕರ್ಯವನ್ನು ಸರಕಾರ ಕಲ್ಪಿಸಬೇಕು. ಸರಕಾರಿ ಮೆಡಿಕಲ್ ಕಾಲೇಜು ಆದರೆ ಯಾರು ಮೆಡಿಕಲ್ ವ್ಯಾಸಂಗಮಾಡಲು ವಿದೇಶಕ್ಕೆ ಹೋಗಬೇಕಿಲ್ಲ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗಿದೆ. ಇದು ಹೋರಾಟ ಆರಂಭ ಅಷ್ಟೇ. ಮುಂದೆ ಪ್ರತಿ ವಿಧಾನಸಭೆಯಲ್ಲೂ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತೇವೆ, ಎಂದರು
ಮಲ್ಪೆಯ ಗಾಂಧಿ ಪ್ರತಿಮೆ ಬಳಿಯಿಂದ ಆರಂಭವಾಗಿ, ಮಲ್ಪೆ ಪೋಲಿಸ್ ಠಾಣೆಯ ಮುಂದಿನಿಂದ, ಮಲ್ಪೆ ಬಸ್ಸ್ ನಿಲ್ದಾಣದ ಮುಖಾಂತ ಕಲ್ಮಾಡಿ – ಅದಿ ಉಡುಪಿ- ಕರಾವಳಿ ಬೈಪಾಸ್, - ಬನ್ನಂಜೆ- ಉಡುಪಿ ಸಿಟಿ ಬಸ್ಸ್ ನಿಲ್ದಾಣ- ಕುಂಜುಬೆಟ್ಟು- ಇಂದ್ರಾಳಿ- ಮಣಿಪಾಲ ಸಿಂಡಿಕೆಟ್ ಸರ್ಕಲ್ ನಲ್ಲಿ ಎಡಕ್ಕೆ ತಿರುಗಿ ಡಿ.ಸಿ. ಕಚೇರಿಯ ಮಾರ್ಗದಲ್ಲಿ ಸಂಚರಿಸಿ, ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಡಿಸಿಯವರಿಗೆ, ಶಾಸಕರು ಮತ್ತು ಎಂಪಿ ಅವರಿಗೆ ಮನವಿಯನ್ನು ಸಲ್ಲಿಸಲಿದರು.
ಕರಾವಳಿ ಯೂತ್ ಕ್ಲಬ್ ಸದಸ್ಯರು, ಸಮಾನ ಮನಸ್ಕರು ಈ ಮೌನ ಪಾದಯಾತ್ರೆಯಲ್ಲಿ ಪಾಲ್ಗೊಂಡರು.