ಮಂಗಳೂರು, ಏ 01 (DaijiworldNews/MS): ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಗುರುವಾರ ನಗರದ ಅತ್ತಾವರದ ಇಕ್ಬಾಲ್ ಅಹ್ಮದ್ ಅವರಿಗೆ ಸೇರಿದ 8.3 ಕೋಟಿ ರೂ. ಮೌಲ್ಯದ ಮನೆಯನ್ನು ಜಪ್ತಿ ಮಾಡಿದ್ದಾರೆ.
ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಷರೀಫ್ ಮೆರೈನ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಂಗಳೂರಿನ ನಿವಾಸಿ ಇಕ್ಬಾಲ್ ಅಹ್ಮದ್ ಅವರು ಫೆಮಾದ ನಿಬಂಧನೆಗಳನ್ನು ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಸ್ಥಿರಾಸ್ತಿ ಸಂಪಾದಿಸಿದ್ದ ಆರೋಪದ ಮೇಲೆ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ತಿಳಿಸಿದೆ.
ದುಬೈನ ಯುಎಇ ನಲ್ಲಿ 53.09 ಲಕ್ಷ ರೂ.ಯುಎಇ ದಿರಂಗಳ (ಭಾರತದ 8.3 ಕೋಟಿ ರೂಪಾಯಿ) ಸ್ಥಿರಾಸ್ತಿ ಸಂಪಾದಿಸಿದ್ದರು. ಇದು ಫೆಮಾದ ಸೆಕ್ಷನ್ 4ರ ಸ್ಪಷ್ಟ ಉಲ್ಲಂಘನೆಯಾಗಿದೆ.
ಭಾರತದೊಳಗೆ ಅಂತಹ ವಿದೇಶಿ ಮೌಲ್ಯದ ಸಮಾನ ಮೌಲ್ಯವನ್ನು ವಶಪಡಿಸಿಕೊಳ್ಳಲು ಇಡಿ ಅಧಿಕಾರವನ್ನು ಹೊಂದಿದೆ. ಹೀಗಾಗಿ ಮಂಗಳೂರಿನ ಅತ್ತಾವರದಲ್ಲಿ ನೆಲೆಸಿರುವ ವಸತಿ ಗೃಹದ ರೂಪದಲ್ಲಿ ಸ್ಥಿರಾಸ್ತಿ 8.3 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಫೆಮಾ ಸೆಕ್ಷನ್ 37 ಎ ಅಡಿಯಲ್ಲಿ ಇಡಿ ಮುಟ್ಟುಗೋಲು ಹಾಕಿಕೊಂಡಿದೆ.