ಕುಂದಾಪುರ, ಮಾ. 31 (DaijiworldNews/SM): ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 18 ವರ್ಷ ಪ್ರಾಯದ ವಿದ್ಯಾರ್ಥಿಗಳಿಬ್ಬರು ಹೊಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕುಂದಾಪುರ ತಾಲೂಕಿನ ಅಮಾಸೆಬೈಲು ಠಾಣೆ ವ್ಯಾಪ್ತಿಯ ಮಚ್ಚಟ್ಟು ಕಳೀನಜೆಡ್ಡು ಹೊಳೆಯಲ್ಲಿ ಗುರುವಾರ ನಡೆದಿದೆ.
ಉಳ್ಳೂರು-74 ಎಂಬಲ್ಲಿನ ನಿವಾಸಿಗಳಾದ ಸುಮಂತ ಮಡಿವಾಳ (18), ಗಣೇಶ್ (18) ಮೃತ ದುರ್ದೈವಿಗಳು. ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದ ಸುಮಂತ್ ಹಾಗೂ ಗಣೇಶ್ ಸ್ನೇಹಿತರಾಗಿದ್ದು ಗುರುವಾರ ಮಧ್ಯಾಹ್ನದ ವೇಳೆಗೆ ಹೊಳೆ ಬಳಿ ತೆರಳಿದ್ದು ಸ್ನಾನಕ್ಕೆಂದು ನೀರಿಗಿಳಿದಿದ್ದಾರೆ. ಈ ವೇಳೆ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಾರೆನ್ನಲಾಗಿದೆ. ಇದನ್ನು ಕಂಡ ವ್ಯಕ್ತಿಯೊಬ್ಬರ ಮಾಹಿತಿಯಂತೆ ಸ್ಥಳೀಯರು ರಕ್ಷಿಸಲು ಮುಂದಾದರೂ ಕೂಡ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಅಮಾಸೆಬೈಲು ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.