ಸಂಪಾಜೆ, ಮಾ 31 (DaijiworldNews/MS): ಕಳೆದ ಕೆಲವು ದಿನಗಳ ಹಿಂದೆ ಸುಳ್ಯ ತಾಲೂಕನ್ನು ಬೆಚ್ಚಿಬೀಳಿಸಿದ್ದ ಸಂಪಾಜೆಯ ಜ್ಯೋತಿಷಿ ಅಂಬರೀಶ್ ಭಟ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಲ್ಲಿ ನಾಲ್ವರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಕಾರ್ತಿಕ್(38) ಹಾಗೂ ನರಸಿಂಹನ್(40) , ಹಾಸನ ಮೂಲದ ಯದುಕುಮಾರ್(33) ಹಾಗೂ ದೀಕ್ಷಿತ್ (26) ಎಂದು ಗುರುತಿಸಲಾಗಿದೆ. ಆರೋಪಿಳಿಂದ ನಗದು , ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಕೆಲವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆ ತನಿಖೆ ಚುರುಕುಗೊಳಿಸಿದ್ದಾರೆ.
ಸಂಪಾಜೆಯ ಚಟ್ಟೆಕಲ್ಲು ಎಂಬಲ್ಲಿ ಅಂಬರೀಶ್ ಭಟ್ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು ಮಚ್ಚು ಹಿಡಿದು ಬೆದರಿಸಿ ಚಿನ್ನ ಹಾಗೂ ಸುಮಾರು 1.8 ಲಕ್ಷ ರೂಪಾಯಿ ದರೋಡೆ ನಡೆಸಿದ್ದರು.
ಸಂಪಾಜೆಯಲ್ಲಿ ಪೌರೋಹಿತ್ಯ ಹಾಗೂ ಜ್ಯೋತಿಷ್ಯ ಕಾರ್ಯದಲ್ಲಿ ತೊಡಗಿದ್ದ ಅಂಬರೀಶ್ ಅವರ ಮನೆಗೆ ಮಾ.20 ಭಾನುವಾರ ರಾತ್ರಿ ಸುಮಾರು 8.30 ರ ಹೊತ್ತಿಗೆ ನುಗ್ಗಿದ ದರೋಡೆಕೋರರು ಅಂಬರೀಶ್ ಅವರ ಸೊಸೆ ಹಾಗೂ ಪತ್ನಿಯನ್ನು ಬೆದರಿಸಿ ದರೋಡೆ ಮಾಡಿದ್ದರು. ಈ ಸಮಯದಲ್ಲಿ ಅಂಬರೀಶ್ ಭಟ್ ಹಾಗೂ ಅವರ ಪುತ್ರ ಮನೆಯಲ್ಲಿ ಇರಲಿಲ್ಲ.ಈ ಪ್ರಕರಣದ ಬಗ್ಗೆ ಅಂಬರೀಶ್ ಅವರ ಸೊಸೆ ಆಶಾ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕರಾದ ಸೋನಾವಣೆ ಋಷಿಕೇಶ್ ಭಗವಾನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ನಿರ್ದೇಶನದಂತೆ ಪೊಲೀಸ್ ಉಪಾಧೀಕ್ಷಕ ಗಾನಾ ಪಿ ಕುಮಾರ್ ಅವರು ಸುಳ್ಯ ಪೊಲೀಸ್ ವೃತ್ತನಿರೀಕ್ಷಕ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ವಿವಿಧ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು
ಈ ಕಾರ್ಯಾಚರಣೆಯಲ್ಲಿ ಸುಳ್ಯ ಪೊಲೀಸ್ ಉಪನಿರೀಕ್ಷಕರಾದ ದಿಲೀಪ್ ಆರ್ , ರತ್ನಕುಮಾರ್, ಬಂಟ್ವಾಳ ಠಾಣಾ ಪಿಎಸ್ಐ ಹರೀಶ್ ಎಂ ಆರ್, ಬೆಳ್ಳಾರೆ ಠಾಣಾ ಎಎಸ್ಐ ಭಾಸ್ಕರ್, ಪೊಲೀಸ್ ಇಲಾಖಾ ಸಿಬಂದಿಗಳಾದ ಜಯರಾಮ್, ಉದಯ್ ಗೌಡ , ಅನಿಲ್, , ಮಹದೇವ ಪ್ರಸಾದ್ , ದೇವರಾಜ್, ವಿಜಯಕುಮಾರ್ ಭಾಗವಹಿಸಿದ್ದರು.