ಕಾರ್ಕಳ, ಮಾ. 30 (DaijiworldNews/SM): ಉಡುಪಿ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ 4 ತಾಲೂಕುಗಳ 42 ಗ್ರಾಮ ಪಂಚಾಯತ್ ಗಳು ಒಳಗೊಂಡಂತೆ ಅಲ್ಲಿ ಶೇಖರಿಸಲ್ಪಡುವ ಘನ ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಏಕೈಕ ಎಂಆರ್ಎಫ್ ಕೇಂದ್ರ( ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಘಟಕ)ವು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪದವಿನಲ್ಲಿ ಸುಮಾರು ೪ ಕೋಟಿ ವೆಚ್ಚದಲ್ಲಿ ೨ ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಸ್ಥಾಪನೆಗೊಳ್ಳುತ್ತಿದೆ.
ಸ್ವಚ್ಚ ಭಾರತ್ ಮಿಷನ್(ಗ್ರಾಮೀಣ)ಯೋಜನೆಯಡಿಯಲ್ಲಿ ಈ ಕೇಂದ್ರದ ಮೂಲಕ ತ್ಯಾಜ್ಯದಿಂದ ಸುಮಾರು ಶೇ.90ಕ್ಕಿಂತಲೂ ಅಧಿಕ ಸಂಪನ್ಮೂಲ ಕ್ರೋಡಿಕರಿಸಲಿದೆ. ಇಲ್ಲಿ ಕಡಿಮೆ ಮಾನವ ಸಂಪನ್ಮೂಲದ ಸಹಾಯದಿಂದ ಪರಿಣಾಮಕಾರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡಲಿದೆ. ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಪರಿಹಾರ ಒದಗಿಸಿ ಪರಿಸರ ಸಂರಕ್ಷಣೆಗೆ ಒತ್ತು ದೊರಕಲಿದೆ.
ಆ ಮೂಲಕ ರಾಜ್ಯದಲ್ಲಿಯೇ ಹೊಸ ಅಧ್ಯಾಯಕ್ಕೆ ಪೀಠಿಕೆಯಾಗಲಿದೆ.
ಅನುದಾನಗಳೆಷ್ಟು?
ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಯೋಜನೆ ಇದಾಗಿದೆ. ಈಲ್ಲಾ ಪಮಚಾಯತ್ ಮೇಲ್ವಿಚಾರಣೆಯಲ್ಲಿ ಕಾರ್ಕಳ ತಾಲೂಕಿನ ನಿಟ್ಟೆಯ ಪದವಿನಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಕಾರ್ಕಳ,ಡುಪಿ, ಕಾಪು, ಹೆಬ್ರಿಯ 42 ಗ್ರಾಮ ಪಮಚಾಯತ್ಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತದೆ. ಸಾಹಸ್ ಜೀರೋ ವೇಸ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ತಾಂತ್ರಿಕ ಮಾರ್ಗದರ್ಶನ ನೀಡುತ್ತಿದೆ. ಮಂಗಳೂರಿನ ಮಂಗಳ ರಿಸೋರ್ಟ್ ಮ್ಯಾನೇಜ್ಮೆಂಟ್ ನಿರ್ವಹಣೆ ಮಾಡಲಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು ಇಲ್ಲಿಂದ ಸ್ವಚ್ಛ ಭಾರತ್ (ಗ್ರಾಮೀಣ) ಯೋಜನೆಯಡಿ ಬಿಡುಗಡೆಯಾಧ 250 ಲಕ್ಷ ರೂ. ಅನುದಾನವನ್ನು ಬಳಸಿಕೊಳ್ಳಲಾಗಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ.8.32 ಹಾಗೂ 15ನೇ ಹಣಕಾಸುಯೋಜನೆಯಡಿ ರೂ. ೨೮.೩೫ ಗ್ರಾಮ ವಿಕಾಸ ಯೋಜನೆಯಡಿ 10 ಲಕ್ಷ ರೂ. ಹಾಗೂ ನಿಟ್ಟೆ ಗ್ರಾಮ ಪಂಚಾಯತ್ನ ಸ್ವಂತ ಅನುದಾನ 23 ಲಕ್ಷ ರೂ. ಅನುದಾನ ಸೇರಿ ಸುಮಾರು ರೂ.60.67 ಲಕ್ಷ ಇತರ ಅನುದಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.
ಯೋಜನೆಯ ಕಾರ್ಯಾಚರಣೆ :
ಯೋಜನೆ ವ್ಯಾಪ್ತಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಸಂಗ್ರಹಿಸಲಾದ ಒಣ, ಒಣ,ಅಪಾಯಕಾರಿ ತ್ಯಾಜ್ಯಗಳನ್ನು ನಿರ್ವಹಣಾ ಕೇಂದ್ರ ಸ್ವಚ್ಛ ಸಂಕೀರ್ಣಕ್ಕೆ ತಂದು ಅಲ್ಲಿ ತ್ಯಾಜ್ಯವನ್ನು ತೂಕಮಾಡಿ ಪ್ಯಾಕ್ ಮಾಡಲಾಗುತ್ತದೆ. ಪ್ರತಿವಾರ ಎಮ್.ಆರ್.ಎಫ್ ಕೇಂದ್ರದ ತ್ಯಾಜ್ಯ ಸಂಗ್ರಹಣಾ ವಾಹನವು ಸ್ವಚ್ಛ ಸಂಕೀರ್ಣಗಳಿಂದ ಒಣ ತ್ಯಾಜ್ಯವನ್ನು ಕೊಂಡೊಯ್ಯುತ್ತವೆ. ಈ ತ್ಯಾಜ್ಯವನ್ನು ಎಮ್.ಆರ್.ಎಫ್ ಕೇಂದ್ರದಲ್ಲಿತೂಕ ಮಾಡಿ ಶೇಖರಿಸಿ 25ರಿಂದ 30 ವಿಭಾಗವಾಗಿ ವಿಂಗಡಿಸಲಾಗುತ್ತದೆ. ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ರಿಸೈಕಲಿಂಗ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುರ್ನಬಳಕೆಯಾಗದ ತ್ಯಾಜ್ಯವನ್ನು ಕೋ ಪ್ರೋಸೆಸಿಂಗ್ ಉದ್ದೇಶಕ್ಕೆ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸಲಾಗುತ್ತದೆ. ಘಟಕದಲ್ಲಿ 30 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಫ್ಆರ್ಎಫ್ ಘಟಕವು 1000 ಚದರ ಅಡಿಯ ಕಟ್ಟಡವನ್ನು ಹೊಂದಿದೆ. ದಿನವೊಂದಕ್ಕೆ 10 ಟನ್ ತ್ಯಾಜ್ಯವನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಘಟಕದಲ್ಲಿತ್ಯಾಜ್ಯ ಶೇಖರಣೆ, ವಿಂಗಡಣೆ ಹಾಗೂ ಬೈಲಿಂಗ್ ಮಾಡುವ ವಿಭಾಗಗಳಿವೆ. ಕಚೇರಿ, ಸಕ್ಯೂರಿಟಿ ರೂಮ್, ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯ ಸೌಲಭ್ಯವನ್ನು ಹೊಂದಿದೆ.
ಕನ್ವೆಯರ್ ಬೆಲ್ಟ್, ಬೈಲಿಂಗ್ಯಂತ್ರ, ಸ್ಟ್ಯಾಕರ್, ಫೈರ್ ಸೇಫ್ಟಿ ಸೌಲಭ್ಯ, ಜನರೇಟರ್, ಸಿಸಿ ಟಿ,ವಿ, 70 ಟನ್ ಸಾಮರ್ಥ್ಯದ ವೇ ಬ್ರಿಡ್ಜ್ ಹಾಗೂ ೭ ಟನ್ ಸಾಮರ್ಥ್ಯದ ಟ್ರಕ್ ಮುಂತಾದ ಸೌಲಭ್ಯಗಳಿವೆ.