ಮಂಗಳೂರು, ಮಾ 30 (DaijiworldNews/DB): ಭಾರತೀಯರಾಗಿ ನಾವು ದೇಶದ ಸಂವಿಧಾನವನ್ನು ರಕ್ಷಣೆ ಮಾಡಬೇಕು. ಧರ್ಮಗಳ ಮೂಲಕ ಕೆಲವರು ಒಡೆಯಲು ಬಯಸಿದರೆ ಯುವ ಕಾಂಗ್ರೆಸ್ ಜನರನ್ನು ಒಗ್ಗೂಡಿಸಬೇಕು ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದ್ದಾರೆ.
ಬೆಂದೂರ್ ವೆಲ್ ನ ಸಂತ ಸೆಬಾಸ್ಟಿಯನ್ ಹಾಲ್ ನಲ್ಲಿ ಬುಧವಾರ ನಡೆದ ಯುವ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್, ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳಿಂದ ದೇಶದ ಸ್ವಾತಂತ್ರ್ಯಕ್ಕೆ ಯಾವುದೇ ಕೊಡುಗೆ ಇಲ್ಲ. ಕಾಂಗ್ರೆಸ್ ನ ಕೆಲವು ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಯುವಕರು ಕಾಂಗ್ರೆಸ್ ನ ಶಕ್ತಿ. ಪಕ್ಷಕ್ಕಾಗಿ ಯುವಕರು ತೊಡಗಿಸಿಕೊಳ್ಳಬೇಕು. ಸದಸ್ಯತ್ವ ಅಭಿಯಾನದಲ್ಲಿ ಕರ್ನಾಟಕ ಕಾಂಗ್ರೆಸ್ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಆದರೆ ದಕ್ಷಿಣ ಕನ್ನಡವು ನಿರೀಕ್ಷಿತ ಗುರಿ ತಲುಪಿರದಿರುವುದು ವಿಷಾದದ ಸಂಗತಿ ಎಂದವರು ಇದೇ ವೇಳೆ ತಿಳಿಸಿದರು.
ಹಿಂದೂ ದೇವಳಗಳ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ನಿರ್ಬಂಧದ ಕುರಿತು ಮಾತನಾಡಿದ ಅವರು, ಮೊದಲು ನಾವು ಭಾರತೀಯರು, ನಂತರ ಕನ್ನಡಿಗರು. ಕನ್ನಡಿಗರಿಗೆ ವ್ಯಾಪಾರ ನಿರ್ಬಂಧಿಸುವುದು ಸಮಂಜಸವೇ ಎಂದು ಪ್ರಶ್ನಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಮಾತನಾಡಿ, ಕೆಲವರು ಧರ್ಮಗಳ ನಡುವೆ ಒಡಕು ಮೂಡಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದು ಗಾಂಧಿ ಮತ್ತು ಗೋಡ್ಸೆ ಅನುಯಾಯಿಗಳ ನಡುವಿನ ಜಗಳವಾಗಿದೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಈ ದೇಶ ನಿರ್ಮಾಣದಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ಹಾಗಾಗಿ ಸಂವಿಧಾನವನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ಹಿಂದೂ, ಮುಸ್ಲಿಂರ ಹತ್ಯೆ ನಡೆದಿದೆ. ಯಾವೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಹೆಸರು ಇದರಲ್ಲಿ ಕೇಳಿ ಬಂದಿಲ್ಲ. ಆದರೆ ಬಿಜೆಪಿ, ಎಸ್ ಡಿಪಿಐ ಯಲ್ಲಿ ತೊಡಗಿಸಿಕೊಂಡವರ ಹೆಸರು ಕೇಳಿ ಬಂದಿದೆ. ಕಾಂಗ್ರೆಸ್ ಅಹಿಂಸಾ ತತ್ವದಲ್ಲಿ ನಂಬಿಕೆ ಇಟ್ಟಿದೆ ಎಂದು ಹೇಳಿದರು.
ಮಾಜಿ ಎಂಎಲ್ ಸಿ ಐವನ್ ಡಿಸೋಜ ಮಾತನಾಡಿ, ಯುವ ಕಾಂಗ್ರೆಸ್ ನ ಪ್ರಯತ್ನಗಳು ಪಕ್ಷದ ಮುಂದಿನ ಭವಿಷ್ಯವಾಗಿದೆ. 2023ರಲ್ಲಿ ರಾಜ್ಯ ಮತ್ತು 2024 ಕೇಂದ್ರದಲ್ಲಿ ಖಂಡಿತವಾಗಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ದೇಶದ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಕಾಂಗ್ರೆಸ್ ಈ ದೇಶಕ್ಕೆ ಅಗತ್ಯವಾಗಿದೆ. ಕಾಂಗ್ರೆಸ್ ಮರಳಿ ಅಧಿಕಾರ ಪಡೆಯುವಲ್ಲಿ ಯುವ ಕಾರ್ಯಕರ್ತರ ಶ್ರಮ ತುಂಬಾ ಅಗತ್ಯವಾಗಿದೆ ಎಂದರು.
ಮಾಜಿ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಯುವಕರು ಪಕ್ಷದ ಬೆನ್ನೆಲುಬು ಇದ್ದಂತೆ. ಯುವಕರಿಲ್ಲದೆ ಪಕ್ಷವಿಲ್ಲ. ಯುವಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಮಿಥುನ್ ರೈ, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಅನಿಲ್ ಕುಮಾರ್ ಜಾದವ್, ವಿದ್ಯಾ ಬಾಲಕೃಷ್ಣನ್, ಮಾಜಿ ಶಾಸಕ ಮೊಯ್ದೀನ್ ಬಾವ ಮೊದಲಾದವರು ಮಾತನಾಡಿದರು. ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಈ ವೇಳೆ ನಡೆಯಿತು. ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೊ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ರಾಕೇಶ್ ದೇವಾಡಿಗ, ಸುನಿಲ್ ಪೂಜಾರಿ, ಮೊಹಮ್ಮದ್ ಮುಫಿದ್ ಮತ್ತಿತರರು ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ ಸ್ವಾಗತಿಸಿದರು.