ಉಡುಪಿ, ಮಾ 30 (DaijiworldNews/DB): ಉಡುಪಿಯಲ್ಲಿ ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕಾರ ಮಾಡದೆ ಅವಕಾಶ ನೀಡುವಂತೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಮುಸಲ್ಮಾನ ವರ್ತಕರು ಮನವಿ ಮಾಡಿದರು.
ಉಡುಪಿ ಜಿಲ್ಲಾ ಸೌಹಾರ್ದ ಸಮಿತಿಯಿಂದ ಅಬೂಬಕ್ಕರ್ ಆತ್ರಾಡಿ ನೇತೃತ್ವದಲ್ಲಿ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿದ ಮುಸ್ಲಿಂ ವರ್ತಕರು, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿರುವುದರಿಂದ ಬೀದಿಬದಿ ಜಾತ್ರೆ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.
ಉಡುಪಿಯಲ್ಲಿ ಹಿಜಾಬ್ ಹೋರಾಟದ ಪರಿಣಾಮ ಮುಸಲ್ಮಾನ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ನಡೆಯುತ್ತಿದೆ. ಯಾರಿಂದ ಅನ್ಯಾಯವಾಗಿದೆ ಅವರು ಸಮಸ್ಯೆ ಸರಿ ಮಾಡಿಕೊಳ್ಳಬೇಕು. ತಪ್ಪು ಮಾಡಿದವರನ್ನು ಆ ಸಮಾಜ ಶಿಕ್ಷಿಸಲಿ. ಮಾಡಿದ ತಪ್ಪನ್ನು ಆ ಸಮಾಜ ಪ್ರತಿಭಟಿಸಲಿ. ಒಬ್ಬರು ಮಾಡಿದ ಅನ್ಯಾಯ ಇಡೀ ಸಮಾಜಕ್ಕೆ ತಟ್ಟುತ್ತದೆ. ತಪ್ಪಿತಸ್ಥರಿಗೆ ಬೆನ್ನೆಲುಬಾಗಿ ನಿಲ್ಲದಿದ್ದರೆ ಹಿಂದೂ ಸಮಾಜಕ್ಕೆ ನೋವಾಗುವುದಿಲ್ಲ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಈ ವೇಳೆ ನುಡಿದರು.
ಮುಸಲ್ಮಾನರು ಮತ್ತು ಕ್ರೈಸ್ತ ಮುಖಂಡರು ವ್ಯಾಪಾರ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಶಾಂತಿ-ಸಾಮರಸ್ಯ ಸೌಹಾರ್ದ ನೆಮ್ಮದಿ ಅವಶ್ಯವಾಗಿ ಬೇಕು. ಒಂದು ಗುಂಪಿನಿಂದ ಸಾಮರಸ್ಯ ಸಾಧ್ಯವಿಲ್ಲ. ಹಿಂದೂ ಸಮಾಜ ಬಹಳ ಕಾಲದಿಂದ ನೋವುಂಡಿದೆ. ಹಲವು ಅಹಿತಕರ ಘಟನೆಗಳಿಂದ ಹಿಂದೂ ಸಮಾಜ ಬಹಳ ನೋವಿನಲ್ಲಿದೆ. ನಾಲ್ಕು ಮಂದಿ ಧಾರ್ಮಿಕ ಮುಖಂಡರು ಕುಳಿತು ಮಾತನಾಡುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ತಳಮಟ್ಟದಲ್ಲಿ ಇದಕ್ಕೆ ಪರಿಹಾರ ಆಗಬೇಕಾಗಿದೆ ಎಂದು ಸ್ವಾಮೀಜಿಯವರು ಹೇಳಿದರು.
ನಿರಂತರವಾಗಿ ಅನ್ಯಾಯವಾದಾಗ ಬೇಸರ ನೋವು ಸ್ಫೋಟವಾಗುತ್ತದೆ. ಹಿಂದೂ ಸಮಾಜ ಪದೇ ಪದೆ ನೋವನುಭವಿಸಿ ಬೇಸರವಾಗಿ ಇಂದು ಸ್ಫೋಟಗೊಂಡಿದೆ. ಈ ಬೆಳವಣಿಗೆಗೆ ಕಾರಣ ಏನು ಎಂಬುದು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಬೇಕು. ಸಮಾಜಕ್ಕೆ ನೋವಾಗುವ ಯಾವುದೇ ಘಟನೆಗಳು ನಡೆಯದಿದ್ದರೆ ಸಾಮರಸ್ಯ ಬೆಳೆಯಬಹುದು. ವಿಧವೆ ಮಹಿಳೆಯ ಕೊಟ್ಟಿಗೆಯಲ್ಲಿದ್ದ ಎಲ್ಲಾ ಹಸುಗಳನ್ನು ಕಳ್ಳತನ ಮಾಡಲಾಗಿದೆ. ಆ ಮಹಿಳೆ ಬೀದಿಗೆ ಬೀಳುವ ವಾತಾವರಣ ನಿರ್ಮಾಣವಾಗಿದೆ. ಇಂತಹ ಅನೇಕ ಘಟನೆಗಳು ಸಮಾಜದಲ್ಲಿ ನಡೆದು ನೋವು ಮಡುಗಟ್ಟಿದೆ. ನಾವು ಕೂಡ ಇಂತಹ ಹಲವಾರು ನೋವನ್ನು ಅನುಭವಿಸಿದ್ದೇನೆ. ನಾವು ಶಾಂತಿ ಸಹಬಾಳ್ವೆಯಿಂದ ಇರೋಣ ಎಂದು ಬಾಯಲ್ಲಿ ಹೇಳಿದರೆ ಅದು ಸಾಧ್ಯವಿಲ್ಲ. ಸಮಾಜದಲ್ಲಿ ಶಾಂತಿ ಸಹಬಾಳ್ವೆ ನೆಲಸಲು ಯಾರ ಮಧ್ಯಸ್ಥಿಕೆಯ ಬೇಡ ಎಂದು ಪೇಜಾವರ ಶ್ರೀಗಳು ನುಡಿದರು.
ಉಡುಪಿ ಶೋಕಮಾತಾ ಇಗರ್ಜಿ ಧರ್ಮಗುರು ಫಾ| ಚಾರ್ಲ್ಸ್, ಉಡುಪಿ ಧರ್ಮಗುರು ಇಮಾನುಲ್ಲಾಹ್ ಖಾನ್, ಸಾಮಾಜಿಕ ಕಾರ್ಯಕರ್ತ ಅಬ್ದುಲ್ಲಾ ನಾವುಂದ,ಅಬ್ದುಲ್ಲಾ ಪರ್ಕಳ, ಮಣಿಪಾಲ, ಉದ್ಯಮಿ ಕೆ. ಅಬೂಬಕ್ಕರ್ , ಉಡುಪಿ ಎಲೆಕ್ಟಿಕಲ್ಸ್ ಇಲೆಕ್ಟ್ರಾನಿಕ್ಸ್ ಅಧ್ಯಕ್ಷ ಬಿನೇಶ್, ಗಂಗಾಧರ, ಉದ್ಯಮಿಗಳಾದ ಮುಹಮ್ಮದ್ ಮೌಲಾ,
ಅಬೂಬಕರ್ ನೇಜಾರ್, ಜಾಮಿಯಾ ಮಸೀದಿ ಕಾರ್ಯದರ್ಶಿ ವಿ.ಎಸ್. ಉಮರ್, ಬೀದಿ ಬದಿ ವ್ಯಾಪಾರ ಮತ್ತು ಜಾತ್ರಾ ವ್ಯಾಪಾರದ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರೀಫ್ , ಬಳಕೆದಾರರ ವೇದಿಕೆಯ ಬಿ.ಎಚ್. ಶೆಟ್ಟಿಗಾರ್ ಉಪಸ್ಥಿತರಿದ್ದರು.