ಉಡುಪಿ, ಮಾ 30 (DaijiworldNews/DB): ಅಂತರಾಷ್ಟ್ರೀಯ ಮಟ್ಟದ ಕ್ರಿಡಾಕೂಟಕ್ಕೆ ಆಯ್ಕೆಯಾಗಿರುವ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರತಿಭೆ ಮಾಧುರ್ಯಾ ಶೆಟ್ಟಿ ಅವರಿಗೆ ಫ್ರಾನ್ಸ್ ನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಭಾಗವಹಿಸುವ ನಿಟ್ಟಿನಲ್ಲಿ ಬಂಟರ ಸಂಘದ ವತಿಯಿಂದ ಧನ ಸಹಾಯ ವಿತರಣಾ ಕಾರ್ಯಕ್ರಮವು ಉಡುಪಿ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಬಂಟರ ಸಂಘದ ಗೌರವಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಾಧುರ್ಯ ಶೆಟ್ಟಿ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದರೂ ಸಹ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಅವರು ತಮ್ಮ ಸ್ವಂತ ಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ಪ್ರಯತ್ನ ಮಾಡುತ್ತಲೇ ಇರಬೇಕು ಎಂದರು.
ಮಾಧುರ್ಯಳಿಗೆ ಶಾಲೆಯ ಅಧ್ಯಾಪಕರು ಮತ್ತು ಮುಖ್ಯೋಪಾಧ್ಯಾಯರು ತುಂಬಾ ಸಹಕಾರ ನೀಡಿದ್ದಾರೆ. ಉಡುಪಿಯ ಕ್ರೀಡಾ ತರಬೇತುದಾರರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿಯನ್ನು ನೀಡಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಂಪೂರ್ಣ ಸಹಕಾರ ನೀಡುತಿದ್ದಾರೆ ಎಂದವರು ಇದೇ ವೇಳೆ ಹೇಳಿದರು.
ಜಾಗತಿಕ ಬಂಟರ ಸಂಘದ ವತಿಯಿಂದ 50 ಸಾವಿರ ರೂ. ಮತ್ತು ಉಡುಪಿ ಬಂಟರ ಸಂಘದಿಂದ 25 ಸಾವಿರ ರೂ. ನಗದನ್ನು ಕ್ರೀಡಾಪಟು ಮಾಧುರ್ಯ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.
ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ಅಮಿತ್ ಕುಮಾರ್ ಶೆಟ್ಟಿ, ಖಜಾಂಚಿ ಮನೋಹರ್ ಶೆಟ್ಟಿ ತೋನ್ಸೆ, ಉಪಾಧ್ಯಕ್ಷ ಮೋಹನ್ ಶೆಟ್ಟಿ ಉಡುಪಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯ ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.