ಉಡುಪಿ/ಕುಂದಾಪುರ, ಮಾ 30 (DaijiworldNews/DB): ಹಿಜಾಬ್ ಧರಿಸದೇ ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟು ಹಿಡಿದಿರುವ ಉಡುಪಿ ಜಿಲ್ಲೆಯ 40 ಮಂದಿ ವಿದ್ಯಾರ್ಥಿನಿಯರು ಮಂಗಳವಾರದಿಂದ ಆರಂಭಗೊಂಡಿರುವ ಪ್ರಥಮ ಪಿಯುಸಿ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಹಿಜಾಬ್ ನ್ನು ಶಿಕ್ಷಣ ಸಂಸ್ಥೆಗಳಲ್ಲಿ ಧರಿಸುವಂತಿಲ್ಲ ಎಂಬುದಾಗಿ ಉಚ್ಚ ನ್ಯಾಯಾಲಯವು ಆದೇಶ ನೀಡಿದೆ. ಅದರ ಹೊರತಾಗಿಯೂ ಹಿಜಾಬ್ ಧರಿಸಲು ಅವಕಾಶ ನೀಡಿದರೆ ಮಾತ್ರ ಪರೀಕ್ಷೆ ಬರೆಯುವುದಾಗಿ ಈ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದಕ್ಕೆ ಕಾಲೇಜಿನಲ್ಲಿ ಅವಕಾಶ ನಿರಾಕರಿಸಲಾಯಿತು. ಹೀಗಾಗಿ ಜಿಲ್ಲೆಯಲ್ಲಿ 40 ಮಂದಿ ವಿದ್ಯಾರ್ಥಿನಿಯರು ಮೊದಲ ದಿನದ ಪರೀಕ್ಷೆಗೆ ಗೈರಾಗಿದ್ದಾರೆ.
ಕುಂದಾಪುರದಲ್ಲಿ 24, ಬೈಂದೂರಿನಲ್ಲಿ 14 ಮತ್ತು ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿಲ್ಲ. ಕುಂದಾಪುರ ಸರ್ಕಾರಿ ಪಪೂ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ಒಟ್ಟು 14 ಮುಸ್ಲಿಂ ವಿದ್ಯಾರ್ಥಿನಿಯರಿದ್ದು, ಈ ಪೈಕಿ ಆರು ಮಂದಿ ಹಾಜರಾಗಿದ್ದಾರೆ. ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ 28 ಮಂದಿ ಪೈಕಿ 15 ಮಂದಿ ಪರೀಕ್ಷೆ ಬರೆಯಲಿಲ್ಲ. ಇವರಲ್ಲಿ 9 ಮಂದಿ ಹಿಜಾಬ್ ಧರಿಸಿ ಬಂದು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪ್ರಾಂಶುಪಾಲರಲ್ಲಿ ಕೇಳಿದಾಗ, ಪ್ರಾಂಶುಪಾಲರು ಇದಕ್ಕೆ ನಿರಾಕರಿಸಿದರು. ಹೀಗಾಗಿ ವಾಪಾಸ್ ಮನೆಗೆ ತೆರಳಿದರು. 13 ಮಂದಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ಭಂಡಾರ್ಕಾರ್ಸ್ ಕಾಲೇಜಿನ ಐವರಲ್ಲಿ ನಾಲ್ವರು, ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ 8 ಮಂದಿಯಲ್ಲಿ ಇಬ್ಬರು, ಬೈಂದೂರು ಸರಕಾರಿ ಪ.ಪೂ. ಕಾಲೇಜಿನ 10 ಮಂದಿಯಲ್ಲಿ ಇಬ್ಬರು ಹಾಜರಾಗಿದ್ದಾರೆ. ಬಸ್ರೂರು ಶಾರದಾ ಕಾಲೇಜು ಹಾಗೂ ಗಂಗೊಳ್ಳಿಯ ಎಸ್ವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.