ಮಂಗಳೂರು, ಮಾ 30 (DaijiworldNews/MS): ಹಲಾಲ್ ಎನ್ನುವುದು ಇಸ್ಲಾಂ ನ ಅವಿಭಾಜ್ಯ ಅಂಗವಾಗಿದೆ, ಅಲ್ಲಾಹನ ಹೆಸರಿನಲ್ಲಿ ಕೊಯ್ಯಲ್ಪಟ್ಟ ಮಾಂಸವನ್ನು ಬಳಸಿ ಭಕ್ಷಣೆ ಮಾಡಬೇಕು ಎನ್ನುವುದು ಜಗತ್ತಿನ ಮುಸ್ಮಿಮರಿಗೆ ಇರುವ ನಿಯಮವಾಗಿದೆ, ಆದರೆ ಇದು ಯಾವುದೇ ಕಾರಣಕ್ಕೆ ಮುಸ್ಲಿಮೇತರರಿಗೆ ಅನ್ವಯವಾಗುವುದಿಲ್ಲ, ಹೀಗಿದ್ದ ಮೇಲೂ ಸತ್ಯವನ್ನು ಮರೆಮಾಚಿ ಇತರ ಧರ್ಮೀಯರನು ತಿನ್ನಿಸಿ ಅವರನ್ನು ಧರ್ಮಭ್ರಷ್ಟರನ್ನಾಗಿ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ ತಿಳಿಸಿದ್ದಾರೆ.
ಅಲ್ಲಾಹನ ಹೆಸರಿನಲ್ಲಿ ಕೊಯ್ಯಲ್ಪಟ್ಟ ಮಾಂಸವು ತಮಗೆ ಒಪ್ಪಿಗೆ ಇಲ್ಲ ಎಂದಾದಲ್ಲಿ ಸ್ವ ಇಚ್ಛೆಯಿಂದ ಇದನ್ನು ವರ್ಜಿಸಿ ಮುಸ್ಲಿಮೇತರ ವ್ಯಾಪಾರಿಗಳಿಂದ ಖರೀದಿಸಿ ಸೇವಿಸುವುದೇ ಇದಕ್ಕೆ ಬರುವ ಅತ್ಯುತ್ತಮ ಪರಿಹಾರವಾಗಿದೆ.
ಹಲಾಲ್ ನಲ್ಲಿ ಇರುವಂತಹ ನಿಬಂಧನೆಗಳು, ಬಳಸುವ ಪದಗಳು ಮತ್ತು ಅದರ ಅರ್ಥಗಳನ್ನು ಮುಸ್ಲಿಮೇತರರಿಗೆ ತಿಳಿಸುವುದು ಸಮಾಜದ ಕರ್ತವ್ಯವಾಗಿದ್ದು, ಈ ಸತ್ಯಾಸತ್ಯತೆಯನ್ನು ಮರೆಮಾಚಿ ವ್ಯಾಪಾರ ಮಾಡುವುದು ಸರಿಯಾ ಕ್ರಮವಲ್ಲ. ಈ ವಿಚಾರದಲ್ಲಿ ಎರಡು ಸಮಾಜದ ಮುಖಂಡರು ಗಂಭೀರವಾದ ಚರ್ಚೆ ನಡೆಸಿ ಸೂಕ್ತ ಪರಿಹಾರ ಕ್ರಮವನ್ನು ಕಂಡುಕೊಳ್ಳಬೇಕು. ಇದನ್ನು ರಾಜಕೀಯ ಉದ್ದೇಶಕ್ಕೆ ಯಾರು ಬಳಸಿಕೊಳ್ಳಬಾರದು ಎಂದು ರಹೀಂ ಉಚ್ಚಿಲ್ ಉಭಯ ಸಮಾಜದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.