ಕಾರ್ಕಳ, ಮಾ. 29 (DaijiworldNews/SM): ತಾಲೂಕಿನ ನೀರೆ ಗ್ರಾಮದಲ್ಲಿ ಕಾಡುಕೋಣವೊಂದು ಮನೆಯಂಗಳಕ್ಕೆ ನುಗ್ಗಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಕಾಡಿನಿಂದ ಏಕಾಏಕಿಯಾಗಿ ಮನೆಯಂಗಳಕ್ಕೆ ಕಾಡುಕೋಣ ಬಂದಿದ್ದು, ಇದರಿಂದ ಮನೆಯವರು ಆತಂಕಕ್ಕೊಳಗಾದರು. ಬಳಿಕ ಮನೆಮಂದಿ ಸೇರಿ ಕಾಡುಕೋಣವನ್ನು ಓಡಿಸಿದರು. ಆದರೆ ಕಾಡುಕೋಣವು ಗ್ರಾಮದ ಏಕೈಕ ಸಂರ್ಪಕ ರಸ್ತೆಯಲ್ಲಿ ಅಡ್ಡವಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದು, ಇದರಿಂದ ಗ್ರಾಮಸ್ಥರ ಒಡಾಟಕ್ಕೆ ಅಡಚಣೆಯಾಯಿತು.
ಆ ನಂತರ ಗ್ರಾಮಸ್ಥರು ಹರಸಾಹಸಪಟ್ಟು ಕೋಣವನ್ನು ಕಾಡಿಗೆ ಅಟ್ಟಿದರು. ಈ ಭಾಗದಲ್ಲಿ ಆಗಾಗ್ಗೆ ಕಾಡುಕೋಣ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಜನರು ಭೀತಿಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ನೀರೆ ಗ್ರಾಮದ ಹತ್ತಿರ ಪಂಚನಬೆಟ್ಟು ಎಂಬಲ್ಲಿ ಕಾಡುಕೋಣವೊಂದು ಪಾಳುಬಾವಿಗೆ ಬಿದ್ದಿದ್ದು, ಅದನ್ನು ಬಳಿಕ ಅರಣ್ಯ ಇಲಾಖೆಯವರು ರಕ್ಷಣೆ ಮಾಡಿದ್ದರು.
ಬೊಮ್ಮಾರಬೆಟ್ಟು, ನಿರೇ ಗ್ರಾಮ ಸಹಿತ ವಿವಿಧ ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚುತ್ತಿದ್ದು, ಕಾಡು ಬಿಟ್ಟು ನಾಡಿಗೆ ಬರಲು ಆರಂಭಿಸಿವೆ. ಇದರಿಂದ ಜನರು ಆತಂಕದಿಂದಲೇ ದಿನ ಕಳೆಯುವಂತಾಗಿದೆ. ಹಾಗಾಗಿ ಅರಣ್ಯ ಇಲಾಖೆಯವರು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.