ಕಾರ್ಕಳ, ಡಿ 23(SM): ಬಿಸಿಯೂಟ ಸೇವಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಶಾಲೆಯ ಮುಖ್ಯಶಿಕ್ಷಕನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳದ ಕಾಂತಾವರ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಎಂಬವರು ತನ್ನ ಶಾಲೆಯ ವಿದ್ಯಾರ್ಥಿಯೋರ್ವನಿಗೆ ಹಲ್ಲೆ ನಡೆಸಿದ್ದರು. ಈ ವಿಚಾರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.
ಕಾಂತಾವರ ಶಾಲೆಯ ವಿದ್ಯಾರ್ಥಿಯೋರ್ವ ಮಧ್ಯಾಹ್ನದ ಬಿಸಿಯೂಟ ಸೇವನೆಗೆ ನಿರಾಕರಿಸಿದ್ದ. ಇದಕ್ಕೆ ಶಾಲೆಯ ಮುಖ್ಯ ಶಿಕ್ಷಕರು ವಿರೋಧಿಸಿದ್ದಾರೆ. ಹಾಗೂ ಆತನಿಗೆ ಒತ್ತಾಯಪೂರ್ವಕವಾಗಿ ತಿನ್ನಿಸಿದ್ದಾರೆ. ಅಲ್ಲದೆ, ಈ ವೇಳೆ ನಿರಾಕರಿಸಿದ್ದಕ್ಕೆ ಆತನಿಗೆ ಹಲ್ಲೆಯನ್ನು ಕೂಡ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಹಾಗೂ ಹಲ್ಲೆಗೊಳಗಾದ ವಿದ್ಯಾರ್ಥಿಯ ಫೋಟೋಗಳನ್ನು ವೈರಲ್ ಮಾಡಲಾಗಿದೆ. ಇದರ ಆಧಾರದಲ್ಲೇ ಪೊಲೀಸರು ಮುಖ್ಯ ಶಿಕ್ಷಕ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.