ಕುಂದಾಪುರ, ಮಾ 29 (DaijiworldNews/MS): ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳದ ಒಡೆತನದಲ್ಲಿರುವ 1973ನೇ ಇಸವಿಯ 1210ಡಿ ಮಾಡೆಲ್ ಹಳೆ ಲಾರಿ ಹೊಸ ಲುಕ್ನೊಂದಿಗೆ ವಿನ್ಯಾಸಗೊಂಡಿದ್ದು ಭಾನುವಾರ ತೆಕ್ಕಟ್ಟೆಯ ಮಲ್ಯಾಡಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಯಾಣ ಬೆಳಸಲಿದೆ.
ಸತತ 40 ವರ್ಷಗಳಿಂದ ಟ್ರಕ್ ಬಾಡಿ ಬಿಲ್ಡರ್ಸ್ನಲ್ಲಿ ಅನುಭವಿ ಕೆಲಸಗಾರರಾಗಿರುವ ಮಲ್ಯಾಡಿ ಶ್ರೀ ಗಜಾನನ ಟ್ರಕ್ ಬಾಡಿ ಬಿಲ್ಡರ್ಸ್ ಮತ್ತು ವೆಲ್ಡಿಂಗ್ ವಕ್ರ್ಸ್ ಮಾಲಿಕ ಮಂಜುನಾಥ್ ಆಚಾರ್ ಇವರ ನೇತೃತ್ವದ ತಂಡ ಲಾರಿಯನ್ನು ಹೊಸ ಗೆಟಪ್ನೊಂದಿಗೆ ಸಜ್ಜುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಸತತ 3 ತಿಂಗಳ ಕಾಲ ದುಡಿದಿದ್ದಾರೆ.
ತೆಕ್ಕಟ್ಟೆ ಸಮೀಪದ ಉದ್ಯಮಿ, ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ ಇವರು 1976ರಲ್ಲಿ ಲಾರಿ ವಿಕ್ರಯಿಸಿದ್ದು ನಾಲ್ಕು ದಶಕಗಳಿಗೂ ಅಧಿಕ ಕಾಲ ಈ ಲಾರಿ ದುಡಿದಿತ್ತು. ಬಿಡಿಭಾಗಗಳು ಸಿಗದೇ ಇರುವ ಕಾರಣದಿಂದ ಕೆಲ ವರ್ಷಗಳಿಂದ ಮನೆ ಮುಂದೆಯ ಶೆಡ್ನಲ್ಲಿ ಲಾರಿಯನ್ನು ನಿಲ್ಲಿಸಲಾಗಿತ್ತು.
ವರ್ಷಂಪ್ರತಿಯಂತೆ ಈ ವರ್ಷದ ಜನವರಿಯಲ್ಲಿ ಧರ್ಮಸ್ಥಳ ಮೇಳವು ಶಿವರಾಮ ಶೆಟ್ಟಿಯವರ ಮನೆಯಲ್ಲಿ ಸೇವೆ ಆಟ ಮಾಡಲು ಬಂದಾಗ ಶೆಟ್ಟರ ಮನೆಯಲ್ಲಿ ನಿಲ್ಲಿಸಿದ ಈ ಲಾರಿಯನ್ನು ನೋಡಿದ ಮೇಳದ ಯಾಜಮಾನರು ಈ ಲಾರಿಯ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರಿಗೆ ಮಾಹಿತಿ ನೀಡಿದ್ದರು. ಹಳೆ ವಾಹನಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಡಾ.ಹೆಗಡೆಯವರು ಹಳೆ ಲಾರಿಯನ್ನು ಕ್ಷೇತ್ರದ ಕಾರು ಮ್ಯೂಸಿಯಂಗೆ ತರಸಿಕೊಳ್ಳುವ ಬಗ್ಗೆ ಆಸಕ್ತಿ ವಹಿಸಿ ಕೊಡಲೇ ಕ್ಷೇತ್ರಕ್ಕೆ ಲಾರಿಯನ್ನು ತರುವಂತೆ ಶೆಟ್ಟಿಯವರಿಗೆ ವಿಷಯ ಮುಟ್ಟಿಸಿದರು.
ಕ್ಷೇತ್ರದಿಂದ ವಿಷಯ ಸಿಕ್ಕ ಕೊಡಲೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಾರಿ ನೀಡುವುದು ನಮ್ಮ ಭಾಗ್ಯ ಎಂದು ಭಾವಿಸಿದ ಶೆಟ್ಟಿಯವರು ಕೊಡಲೇ ತಮ್ಮ ಕುಟುಂಬಿಕರೊಡನೆ ತಾವೇ ಲಾರಿಯೊಟ್ಟಿಗೆ ತೆರಳಿ ಡಾ.ವೀರೇಂದ್ರ ಹೆಗಡೆಯವರನ್ನು ಭೇಟಿ ಮಾಡಿ ನ.15ರಂದು ಲಾರಿಯನ್ನು ಹಸ್ತಾಂತರ ಮಾಡಿದ್ದರು.ಸಂಪೂರ್ಣ ಮಾಹಿತಿ ಪಡೆದ ಖಾವಂದರರು: ಲಾರಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಖಾವಂದರರು ಲಾರಿಯನ್ನು ಇಷ್ಟು ದಿವಸ ರಿಪೇರಿ ಮಾಡುತ್ತಿದ್ದವರನ್ನು ಕ್ಷೇತ್ರಕ್ಕೆ ಬರಹೇಳಿ ಅವರೊಂದಿಗೆ ಮಾತುಕತೆ ನಡೆಸಿ ಸ್ವತಃ ಹೆಗಡೆಯವರೇ ಲಾರಿಯ ನೀಲ ನಕ್ಷೆ ತಯಾರಿಸಿ ಇದೇ ರೀತಿ ಲಾರಿ ನಮಗೆ ಪುನರ್ ನಿರ್ಮಾಣ ಮಾಡಿ ಕೊಡಬೇಕು ಎಂದು ತಿಳಿಸಿ ಜ.22 ರಂದು ಲಾರಿಯನ್ನು ಮಲ್ಯಾಡಿಯ ಗ್ಯಾರೇಜಿನ ಮಾಲಿಕರ ಕೈಗೆ ನೀಡಲಾಗಿತ್ತು.
ಬಿಡಿಭಾಗಗಳ ಕೊರತೆ: ಕೇವಲ ಈ ಲಾರಿಯನ್ನು ಸಂಪೂರ್ಣವಾಗಿ ರಿಪೇರಿ ಮಾಡಲು 1 ತಿಂಗಳ ಕಾಲವಕಾಶ ಬೇಕಾಗಿದ್ದರೂ ಲಾರಿಯ ಬಿಡಿಭಾಗಗಳು ಸಿಗದೇ ಇರುವ ಕಾರಣದಿಂದ 3 ತಿಂಗಳ ಅವಧಿಯಲ್ಲಿ ಕೆಲಸ ಮಾಡಿ ಲಾರಿಯನ್ನು ಹೊಸ ಲುಕ್ನೊಂದಿಗೆ ನಿರ್ಮಿಸಲಾಗಿದೆ. ಈಗಾಗಲೇ ಲಾರಿಯನ್ನು ಸಂಪೂರ್ಣ ರೀ ಪಿಟಿಂಗ್ ಮಾಡಲಾಗಿದ್ದು ಬ್ಯಾಕ್ ಸೈಡ್ ಬಾಡಿ ಚೇಂಜ್ ಮಾಡಲಾಗಿದೆ. ಟಿಂಕರಿಂಗ್ ಕೆಲಸ ಸಂಪೂರ್ಣವಾಗಿ ಮಾಡಲಾಗಿದ್ದು ನೂತನ ಬಿಡಿ ಭಾಗಗಳನ್ನು ಬೆಂಗಳೂರಿನಿಂದ ತರಿಸಿ ಲಾರಿಯ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹಳಬರ ಕೈಯಲ್ಲೇ ತಯಾರಾದ ಲಾರಿ: ಲಾರಿಯ ಪುನರ್ ನಿರ್ಮಾಣದ ಈ ಕಾಮಗಾರಿಯಲ್ಲಿ ವಿಘ್ನೇಶ್ ಆಚಾರ್, ನಿತೀಶ್ ಆಚಾರ್, ಹರೀಶ್, ಲಾರೆನ್ಸ್ ಬೆರೆಟ್ಟೂ, ರಮೇಶ್, ಕೃಷ್ಣಯ್ಯ ಆಚಾರ್ ಇವರ ಕೈಚಳಕದಲ್ಲಿ ಹಳೆ ಲಾರಿಯ ಮಾದರಿಯಲ್ಲಿಯೇ ವಿನ್ಯಾಸಗೊಳಿಸಿದ್ದಾರೆ. ಸದಾಶಿವ ಪೈಂಟರ್ ಗೋಪಾಡಿ ಇವರ ಬಳಗ ಅಂದವಾದ ಬಣ್ಣವನ್ನು ಬಳಿದು ಲಾರಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕುಂಭಾಸಿಯ ಸ್ಟಾರ್ ಗೋಪಾಲ್ ಇವರು ಲಾರಿಯ ಎಲೆಕ್ಟ್ರೀಕಲ್ ಕೆಲಸವನ್ನು ನಿರ್ವಹಿಸಿದ್ದು ಎಲ್ಲಾ ಎಲೆಕ್ಟ್ರೀಕಲ್ ವಿದ್ಯುತ್ ಲೈಟ್ಗಳು ಸೇರಿದಂತೆ ಇಂಡಿಕೇಟರ್ ಮತ್ತು ವೈಪರ್ಗಳು ಕಾರ್ಯನಿರ್ವಹಿಸುತ್ತಿದೆ. 4 ದಶಕಗಳಿಂದ ಲಾರಿಯನ್ನು ರಿಪೇರಿ ಮಾಡುತ್ತಿದ್ದವರೇ ಈ ಬಾರಿಯೂ ಕೂಡ ಅವರ ತಂಡದ ಸದಸ್ಯರೇ ಲಾರಿಯನ್ನು ರಿಪೇರಿ ಮಾಡಿದ್ದಾರೆ.
ಕುಂದಾಪುರ ತಾಲೂಕಿನ್ಯಾದಂತ ಕಾರ್ಯ ಸಂಚಾರಿಸುತ್ತಿದ್ದ ಹಳೆಯ ಮಾಡೆಲ್ ಲಾರಿಗಳ ಪೈಕಿ ಒಂದಾದ 1973ನೇ ಇಸವಿಯ ಟಾಟಾ ಕಂಪನಿಯ 1210ಡಿ ಲಾರಿಯು ಇನ್ನೂ ಮುಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಹಳೆ ಲಾರಿ ಹೊಸ ಲುಕ್ನೊಂದಿಗೆ ಕಾಣಸಿಗಲಿದೆ.
'ಶಿವರಾಮ ಶೆಟ್ಟಿಯವರು ಸತತ 4 ದಶಕಗಳ ಕಾಲ ನಮಗೆ ಲಾರಿಯನ್ನು ರಿಪೇರಿ ಮಾಡಲು ನಮ್ಮ ಬಳಿಯೇ ಕೆಲಸ ಕಾರ್ಯಗಳಿಗಾಗಿ ನೀಡುತ್ತಿದ್ದರು. ಇದು ನಮ್ಮ ಭಾಗ್ಯವೆಂಬಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದಲೂ ಕೂಡ ನಮ್ಮನ್ನೇ ಅರಸಿ ಈ ಲಾರಿಯ ಪುನರ್ ನಿರ್ಮಾಣಕ್ಕೆ ಪೂಜ್ಯ ಖಾವಂದರರು ಅವಕಾಶ ಮಾಡಿಕೊಟ್ಟಿದ್ದಾರೆ. ಇದೊಂದು ನಮ್ಮ ಸೌಭಾಗ್ಯ ಎಂದು ತಿಳಿದು ಕ್ಷೇತ್ರದ ಮೇಲಿನ ಶ್ರದ್ಧಾ ಭಕ್ತಿಯಿಂದ ಈ ಲಾರಿಯನ್ನು ಪುನರ್ ಜೋಡಿಸಿ ರಿಪೇರಿಗೊಳಿಸಿ ವಿವಿಧ ವಿಭಾಗದ ಕಾರ್ಮಿಕರು ಲಾರಿಯ ವಿನ್ಯಾಸಗೊಳಿಸುವಲ್ಲಿ ದುಡಿದಿದ್ದಾರೆ. ಇವರೆಲ್ಲರ ಸೇವೆ ಅನನ್ಯವಾಗಿದೆ'. -ಮಂಜುನಾಥ್ ಆಚಾರ್ ಮಲ್ಯಾಡಿ, ಗ್ಯಾರೇಜು ಮಾಲಿಕರು.
'ಬಹಳಷ್ಟು ಖುಷಿ ತಂದಿದೆ. ನಮ್ಮ ಕುಟುಂಬದ ಜೀವನಾಡಿಯಾಗಿದ್ದ ಈ ಲಾರಿಯನ್ನು ಹೊಸ ಹೊಳಪಿನೊಂದಿಗೆ ನೋಡುವುದೇ ಮನಸ್ಸಿಗೆ ನೆಮ್ಮದಿ ಮತ್ತು ಖುಷಿ ನೀಡುತ್ತದೆ. ಪೂಜ್ಯ ಖಾವಂದರರ ಮಾರ್ಗದರ್ಶನದಲ್ಲಿ ಅವರ ಇಚ್ಛೆಯಂತೆ ನಮ್ಮೀ ಲಾರಿಯನ್ನ ವಿಶೇಷವಾಗಿ ಅಂದವಾಗಿ ಪುನರ್ ನಿರ್ಮಾಣವಾಗಿರುವುದನ್ನು ನೋಡಿದಾಗ ಕ್ಷೇತ್ರದ ಮೇಲಿನ ಭಕ್ತಿ ಮತ್ತಷ್ಟು ಹೆಚ್ಚಿದಂತಾಗಿದೆ.' ಶಿವರಾಮ ಶೆಟ್ಟಿ ಮಲ್ಯಾಡಿ, ಸಮಾಜ ಸೇವಕರು.