ತಿರುವನಂತಪುರ,ಡಿ 23( (MSP): ಸತತ ಪ್ರತಿಭಟನೆ, ಹಿಂಸಾಚಾರಗಳಿಂದಲೇ ಇತ್ತೀಚೆಗೆ ಸುದ್ದಿಯಾಗಿದ್ದ ಶಬರಿಮಲೆಯಲ್ಲಿ ಪರಿಸ್ಥಿತಿ ಸ್ವಲ್ಪ ಶಾಂತವಾಗಿದೆ ಎನ್ನುವಷ್ಟರಲ್ಲಿ ಮತ್ತೆ ಪ್ರಕ್ಷುಬ್ದತೆ ಉಂಟಾಗಿದೆ . ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಭಾನುವಾರದಂದು ಸುಮಾರು 50 ವರ್ಷದ ಒಳಗಿನ 11 ಮಂದಿಯ ಮಹಿಳಾ ತಂಡವೊಂದು ಪ್ರವೇಶಿಸಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಚೆನ್ನೈ ಮೂಲದ ಮಾನಿಥಿ ಹೆಸರಿನ ಸಂಘಟನೆಯ ಹನ್ನೊಂದು ಮಂದಿ ಮಹಿಳಾ ಮಾಲಾಧಾರಿಗಳು ಅಯ್ಯಪ್ಪನ ದೇಗುಲ ಪ್ರವೇಶಿಸಲು ಪಂಪೆಯಿಂದ ಪಾದಯಾತ್ರೆ ಕೈಗೊಂಡಿದ್ದಾರೆ. ಇವರು ಪಾದಾಯಾತ್ರೆಯ ಮೂಲಕ ದೇಗುಲದತ್ತ ಬರುತ್ತಿದ್ದು ಈ ಸಂದರ್ಭ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ದೇವಾಲಯದತ್ತ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹನ್ನೊಂದು ಮಂದಿ ಮಹಿಳೆಯರಿಗೆ ಪೊಲೀಸರು ವ್ಯಾಪಕ ಭದ್ರತೆಯನ್ನು ಒದಗಿಸಿದ್ದಾರೆ.