ಮಂಗಳೂರು, ಮಾ 28 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯ 99 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಎಸೆಸೆಲ್ಸಿ ಪರೀಕ್ಷೆ ನಡೆದಿದ್ದು, ಪ್ರಥಮ ಭಾಷಾ ಪರೀಕ್ಷೆಗೆ ಒಟ್ಟು 350 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಪ್ರಥಮ ಭಾಷಾ ಪರೀಕ್ಷೆಗೆ ಸಾಮಾನ್ಯ ಪರೀಕ್ಷಾ ಕೇಂದ್ರಗಳಲ್ಲಿ 28611 ವಿದ್ಯಾರ್ಥಿಗಳು ಪ್ರಥಮವಾಗಿ ಪರೀಕ್ಷೆ ಬರೆದಿದ್ದು, 29 ಮಂದಿ ಪುನರಾವರ್ತಿತ ಸೇರಿ ಒಟ್ಟು 28640 ವಿದ್ಯಾರ್ಥಿಗಳಲ್ಲಿ 28423 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 217 ವಿದ್ಯಾರ್ಥಿಗಳು ಗೈರಾಗಿದ್ದರು.
ಇನ್ನು ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ನೋಂದಾಯಿಸಿದ್ದ 878 ಪ್ರಥಮವಾಗಿ ಹಾಗೂ 24 ಮಂದಿ ಪುನರಾವರ್ತಿತ ಸೇರಿ ಒಟ್ಟು 908 ವಿದ್ಯಾರ್ಥಿಗಳಲ್ಲಿ 133 ಮಂದಿ ಗೈರಾಗಿದ್ದು, 769 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಇಂದು ಪ್ರಥಮ ಭಾಷೆ ಕನ್ನಡ ಅಥವಾ ಇಂಗ್ಲಿಷ್(ಉರ್ದು) ಪರೀಕ್ಷೆ ನಡೆದಿದ್ದು, ಬುಧವಾರ ದ್ವಿತೀಯ ಭಾಷಾ ಪರೀಕ್ಷೆ ನಡೆಯಲಿದೆ.
ಇನ್ನು ಎಸೆಸೆಲ್ಸಿ ಪರೀಕ್ಷಾ ಕೇಂದ್ರ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕೈಗೊಂಡಿದ್ದು, ನಗರದ ಕೆಲವು ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾರಾಜೇಂದ್ರ ಕೆ.ವಿ., ಜಿ.ಪಂ ಸಿಇಓ ಡಾ. ಕುಮಾರ್, ಡಿಡಿಪಿಐ ಸುಧಾಕರ್ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ.