ಮಂಗಳೂರು, ಮಾ 28 (DaijiworldNews/MS): ರಾಜ್ಯದಲ್ಲಿ ಇಂದಿನಿಂದ ಎಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಕೊರೊನಾ ಸಾಂಕ್ರಮಿಕದ ಕಾರಣದಿಂದಾಗಿ ಕಳೆದ ವರ್ಷ ಎರಡು ದಿನಕ್ಕೆ ಸೀಮಿತವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಈ ಬಾರಿ 6 ದಿನಗಳ ಕಾಲ ನಡೆಯಲಿದ್ದು, ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.
ಜಿಲ್ಲೆಯಲ್ಲಿಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಪೂರ್ವ ಮತ್ತು ನಂತರ ಸ್ಯಾನಿಟೈಸರ್ ಮಾಡುವ ಮೂಲಕ ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೊನಾದಿಂದಾಗಿ ಪರೀಕ್ಷೆಯಿಂದ ದೂರ ಉಳಿದಿದ್ದ ಮಕ್ಕಳು ಪರೀಕ್ಷೆಗಾಗಿ ಉತ್ಸಾಹದಿಂದ
ಕಾಯುತ್ತಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸುತ್ತಿರುವ ವಿದ್ಯಾರ್ಥಿನಿಯರಿಗೆಹಿಜಾಬ್ ಧರಿಸಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಕೇರಳ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆ:
ಮಾ.28 ಮತ್ತು ಮಾ.29 ರಂದು ಕೇರಳದಲ್ಲಿ ಹರತಾಳವಿದ್ದು, ದ.ಕ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ಕಾಸರಗೋಡಿನ ಮಕ್ಕಳ ಅನುಕೂಲಕ್ಕಾಗಿ ಆ ದಿನಗಳಲ್ಲಿ ಗಡಿಯಿಂದ ವಿಶೇಷ ವಾಹನ ವ್ಯವಸ್ಥೆ ಇದೆ ಎಂದು ಡಿಸಿ ತಿಳಿಸಿದ್ದಾರೆ.
ಈ ಬಾರಿ ರಾಜ್ಯದ 15,387 ಶಾಲೆಗಳ 8,73,846 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಪರೀಕ್ಷೆ ಬರೆಯಲು 45,289 ಪರೀಕ್ಷಾ ಕೊಠಡಿಗಳ ಸಿದ್ಧತೆ ಮಾಡಲಾಗಿದೆ. 3,444 ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯಲಿದ್ದು, 49,817 ಕೊಠಡಿ ಮೇಲ್ವಿಚಾರಕರು ಭಾಗಿಯಾಗಲಿದ್ದಾರೆ.
ರಾಜ್ಯದಲ್ಲಿ ಒಟ್ಟು 8,73,846 ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲಿದ್ದು, ಈ ಪೈಕಿ 4,52,732 ಗಂಡು ಮಕ್ಕಳು ಹಾಗೂ 4,21,110 ಹೆಣ್ಣು ಮಕ್ಕಳಿದ್ದಾರೆ. 04 ಜನ ತೃತಿಯ ಲಿಂಗಿಗಳು ಈ ಬಾರಿ ಪರೀಕ್ಷೆ ಎದುರಿಸುತ್ತಿದ್ದಾರೆ.
ಉಡುಪಿ ಜಿಲ್ಲೆ:
ಇನ್ನು ಉಡುಪಿ ಜಿಲ್ಲೆಯಲ್ಲಿ ಎಸೆಸ್ಸೆಲ್ಸಿ 14022 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು,ಜಿಲ್ಲೆಯಲ್ಲಿ ಒಟ್ಟು 56 ಪರೀಕ್ಷಾ ಕೇಂದ್ರಗಳಿವೆ. ಸಾವಿರದ ಇನ್ನೂರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರಿದ್ದು ಈಗಾಗಲೇ ಹಿಜಾಬ್ ಗಿಂತ ಶಿಕ್ಷಣ ಮುಖ್ಯ ಎಂದು ಧರ್ಮಗುರುಗಳು ಬುದ್ಧಿಮಾತು ಹೇಳಿದ್ದು, ಗೊಂದಲಕ್ಕೆ ಅವಕಾಶವಿಲ್ಲದಂತೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಪೈಕಿ 7229 ಬಾಲಕರು, 6793 ಬಾಲಕಿಯರಿದ್ದಾರೆ.