ಮಂಗಳೂರು, ಮಾ. 27 (DaijiworldNews/SM): ಕೋವಿಡ್ ಬಳಿಕ ಇದೀಗ ಮೊದಲ ಬಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಯೋಜನೆಯಂತೆ ನಡೆಯುತ್ತಿದ್ದು, ಮಾರ್ಚ್ 28ರ ಸೋಮವಾರದಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ. ಈ ನಡುವೆ ಕೇರಳದಲ್ಲಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ದ.ಕ. ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ.
ಮಾರ್ಚ್ 28 ಹಾಗೂ 29ರಂದು ಕೇರಳದಲ್ಲಿ ಹರತಾಳ ಇರುವುದರಿಂದ ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ವಾಹನಗಳ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ತಲಪಾಡಿ ಗಡಿಯಿಂದ ಎರಡು ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದು ಉಪನಿರ್ದೇಶಕರು ಮಾಹಿತಿ ನೀಡಿದರು.
ಆ ಮೂಲಕ ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳು ಗಡಿ ಭಾಗದಿಂದ ನಿಶ್ಚಿಂತೆಯಿಂದ ಪರೀಕ್ಷಾ ಕೇಂದ್ರಗಳತ್ತ ಆಗಮಿಸಬಹುದೆಂದು ತಿಳಿದುಬಂದಿದೆ. ಇತರ ಗಡಿಗಳಲ್ಲಿ ವಾಹನದ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಪೋಷಕರು ಮುನ್ನೆಚ್ಚರಿಕೆ ವಹಿಸಿ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೂ ಮೊದಲು ಕರೆತರಬೇಕಾಗಿದೆ.