ಮಂಗಳೂರು, ಮಾ 27 (DaijiworldNews/DB): ಯುಪಿಎಸ್ ಸಿ, ಕೆಪಿಎಸ್ ಸಿಯಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಮಕ್ಕಳು ಬರೆಯುವಂತೆ ಪೋಷಕರು ಪ್ರೋತ್ಸಾಹ ನೀಡಬೇಕು. ನಮಗೆ ವಿಶೇಷ ಶಕ್ತಿ ಅಗತ್ಯ. ಇಲ್ಲಿ ಶಕ್ತಿ ಎಂದರೆ ಹಣವಲ್ಲ. ಬದಲಾಗಿ ರಾಜಕೀಯ, ಮಾಧ್ಯಮ, ಅಧಿಕಾರವೇ ಆಗಿದೆ ಎಂದು ದೈಜಿವರ್ಲ್ಡ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಅವರು ಹೇಳಿದರು.
ಕೆಲರೈ ಪ್ರೆಸಿಡೆನ್ಸಿ ಶಾಲೆ ಮತ್ತು ಪಿಯು ಕಾಲೇಜು ವಠಾರದಲ್ಲಿ 'ಬದಲಾಣೆಯೊಂದಿಗೆ ಬೆಳವಣಿಗೆ’ ಥೀಂನಡಿ ಶನಿವಾರ ನಡೆದ 12ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ನಮಗೆ ಇನ್ನೊಬ್ಬರ ಮೇಲೆ ಹಿಡಿತ ಸಾಧಿಸುವ ಅಧಿಕಾರ ಬೇಡ, ಬದಲಾಗಿ ಕಡು ಬಡವರನ್ನೂ ಅಭ್ಯುದಯಗೊಳಿಸಿ ಅವರ ಜೀವನ ಬೆಳಗಿಸುವಂತ ಅಧಿಕಾರ, ಶಕ್ತಿಯ ಅಗತ್ಯವಿದೆ. ಇದು ಸಾಧ್ಯವಾಗಬೇಕಾದರೆ ಪೋಷಕರು ತಮ್ಮ ವಿದ್ಯಾರ್ಥಿಗಳನ್ನು ಈಗಿಂದಲೇ ಪ್ರೋತ್ಸಾಹಿಸಿ ಬದಲಾವಣೆಯ ಹಾದಿಯಲ್ಲಿ ಸಿದ್ದಗೊಳಿಸಬೇಕು ಎಂದರು.
ರಾಜಕೀಯದಲ್ಲಿ ಭ್ರಷ್ಟಾಚಾರದ ಕಾರಣದಿಂದ ವಿದ್ಯಾರ್ಥಿಗಳು ಈ ಕ್ಷೇತ್ರದ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ. ಆದರೆ ಅಂತಹ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆಯಬಲ್ಲ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಖಂಡಿತವಾಗಿಯೂ ಇದೆ. ಅದಕ್ಕೆ ಈಗಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ದಗೊಳಿಸುವ ಮೂಲಕ ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವಂತಾಗಬೇಕು ಎಂದವರು ಆಶಿಸಿದರು.
ದೈಜಿವರ್ಲ್ಡ್ ಸಂಸ್ಥೆಯು ಸಾರ್ವಜನಿಕ ಕೊಡುಗೈದಾನಿಗಳ ಸಹಕಾರದೊಂದಿಗೆ ಕಳೆದ 22 ವರ್ಷಗಳಿಂದ 24 ಕೋಟಿ ರೂ. ಸಂಗ್ರಹಿಸಿ ಕಡು ಬಡವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದೆ. ಇದು ಮಾಧ್ಯಮದ ಶಕ್ತಿ. ಅವಶ್ಯವುಳ್ಳವರ ಮಾಹಿತಿ ಸಂಗ್ರಹಿಸಿ ಅವರ ಬ್ಯಾಂಕ್ ವಿವರವನ್ನು ನಮ್ಮ ಮಾಧ್ಯಮದಲ್ಲಿ ಪ್ರಕಟಿಸಿ ದಾನಿಗಳು ನೇರವಾಗಿ ಫಲಾನುಭವಿಗಳ ಖಾತೆಗೆ ನಗದು ಜಮೆ ಮಾಡುವಂತೆ ವ್ಯವಸ್ಥೆ ಮಾಡಿದ್ದೇವೆ. 1500ಕ್ಕೂ ಹೆಚ್ಚು ಬಡ ಕುಟುಂಬಗಳು ಈ ಕಾರ್ಯಕ್ರಮದ ನೆರವು ಪಡೆದಿದ್ದಾರೆ ಎಂದು ವಿವರಿಸಿದರು.
ಪ್ರೆಸಿಡೆನ್ಸಿ ಶಾಲೆಯ ರಮಣೀಯ ವಾತಾವರಣವನ್ನು ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳ ಶಿಸ್ತು ಶ್ಲಾಘನೀಯ. ವರ್ಷಗಳಿಂದ ಕಲಿತ ಶಾಲೆಯನ್ನು ಬಿಟ್ಟು ಹೋಗುವುದು ವಿದ್ಯಾರ್ಥಿಗಳಿಗೆ ನೋವಿನ ವಿಷಯವಾಗುತ್ತದೆ. ಏಕೆಂದರೆ ಅವರು ಆ ಸಂಸ್ಥೆ ಮತ್ತು ಶಿಕ್ಷಕರ ಮೇಲೆ ವಿಶೇಷ ಅವಲಂಬನೆಯನ್ನು ಹೊಂದಿರುತ್ತಾರೆ. ಆದರೆ ಭವಿಷ್ಯದ ದೃಷ್ಟಿಯಿಂದ ಶಾಲೆಯನ್ನು ಬಿಟ್ಟು ಹೋಗುವುದು ವಿದ್ಯಾರ್ಥಿಗಳಿಗೆ ಅನಿವಾರ್ಯ ಎಂದ ಅವರು, ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಶಾಲೆಗೆ ಕೀರ್ತಿ ತರಬೇಕು ಎಂದು ಅವರು ಆಶಿಸಿದರು.
ಶೈಲಾ ಸಲ್ಡಾನ ಅವರು ಸ್ಕೂಲ್ ಕ್ಯಾಪ್ಟನ್ ಗಳಾದ ರಿಶಾನ್ ಮಹೇಶ್ ಮತ್ತು ಆದಿತ್ಯ ಶೆಟ್ಟಿ ಅವರಿಗೆ ಧ್ವಜ ಹಸ್ತಾಂತರಿಸಿದರು. ಉಪ ಕ್ಯಾಪ್ಟನ್ ಗಳಾದ ಅಬ್ದುಲ್ ಸಾಹೀಲ್, ಮೊಹಮ್ಮದ್ ಔಫ್ ಪ್ರಮಾಣವಚನ ಬೋಧಿಸಿದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಾದ ಮೊಹಮ್ಮದ್ ಫರಾಜ್ ಮತ್ತು ಕ್ಲಿವಿಯಾ ವೇಗಸ್ ಅವರನ್ನು ಸಮ್ಮಾನಿಸಲಾಯಿತು.
ದೈಜಿವರ್ಲ್ಡ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ನ ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತಾವ್ರೋ ಅವರು ಗೌರವ ಅತಿಥಿಯಾಗಿದ್ದರು. ಪಿಎಸ್ಎಂಎನ್ ಜಿ ಗ್ರೂಪ್ ನ ಸಹಾಯಕ ನಿರ್ದೇಶಕ ಅರುಣ್ ದೇವರಾಜ್, ಶಾಲಾ ಪ್ರಾಂಶುಪಾಲೆ ಶೈಲಾ ಸಲ್ಡಾನ, ಮ್ಯಾನೇಜ್ ಮೆಂಟ್ ರೆಪ್ರೆಸೆಂಟೇಟಿವ್ ಜಾವೆದ್, ಆಡಳಿತ ವಿಭಾಗದ ಮುಖ್ಯಸ್ಥೆ ಪ್ರತಿಭಾ ಚೇತನ್ ಮತ್ತಿತರರು ಉಪಸ್ಥಿತರಿದ್ದರು. ಇಬ್ಬರು ವಿದ್ಯಾರ್ಥಿಗಳು ಮತ್ತು ಪೋಷಕರು ಸಂಸ್ಥೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.