ಕುಂದಾಪುರ, ಮಾ 27 (DaijiworldNews/HR): ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದೇವಿಗೆ ಸಲ್ಲಿಸುವ ಪ್ರದೋಷ ಪೂಜೆ ಅಥವಾ ಸಲಾಂ ಮಂಗಳಾರತಿ ಕುರಿತು ವಿಎಚ್ಪಿ ವಿವಾದ ಸೃಷ್ಟಿಸಿರುವ ಕುರಿತು ಕೊಲ್ಲೂರು ದೇವಸ್ಥಾನದ ಅರ್ಚಕ ಕೆವಿ ಶ್ರೀಧರ ಅಡಿಗ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಶ್ರೀಧರ ಅಡಿಗ, ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಪ್ರದೋಷ, ಎರಡು ರಾತ್ರಿ ಕಾಲದಲ್ಲಿ ಪೂಜೆ ನಡೆಯುತ್ತದೆ. ಇದೊಂದು ಬಹಳ ಅರ್ಥಗರ್ಭಿತವಾದ ಪೂಜೆ. ಪ್ರದೋಷ ಕಾಲ ಎಂಬುದಕ್ಕೆ ಬಹಳ ಮಹತ್ವವಿದೆ. ಪ್ರದೋಷ ಕಾಲದಲ್ಲಿ ಎಲ್ಲಾ ದೇವಿ ದೇವತೆಗಳ ಸಾನಿಧ್ಯ ಇರುತ್ತದೆ ಎಂಬ ನಂಬಿಕೆಯಿದೆ. ಪ್ರದೋಷ ಕಾಲದಲ್ಲಿ ನಡೆಯುವ ಪೂಜೆಗಳ ವೈಶಿಷ್ಟ ಬೇರೆಯೇ ಇದೆ. ನಾವು ಆ ಕಾಲದಲ್ಲಿ ದೇವಿಗೆ ಪೂಜೆಯನ್ನ ನಡೆಸುತ್ತೇವೆ. ವೈಭವೋಪೇತವಾಗಿ ರಾಗೋಪಚಾರ ದೀಪಾರಾಧನೆಗಳನ್ನು ನಡೆಸುತ್ತೇವೆ ಎಂದರು.
ಇನ್ನು ಕರುಣಾ ಕರುಣಿಕೆಯಲ್ಲಿ ಕೇಳಿಬಂದ ಪ್ರಕಾರ ದೊರೆ ಟಿಪ್ಪು ಪೂಜೆಯಲ್ಲಿ ಭಾಗವಹಿಸಿದ್ದ. ಪ್ರದೋಷ ಪೂಜೆ ಸಂದರ್ಭದಲ್ಲಿ ಸಲಾಮ್ ಮಾಡಿದ್ದ ಅಂತ ಕರುಣಾಕರುಣಿಕ ಅರ್ಥಾತ್ ವಾಡಿಕೆಯಾಗಿ ಬಂದಿದೆ. ಇದಕ್ಕೆ ಯಾವುದೇ ತರಹದ ದಾಖಲೆಗಳು ಇಲ್ಲ. ಇದೊಂದು ಹೇಳಿಕೊಂಡು ಬಂದಿರುವಂತಹ ಮಾತು. ಪ್ರದೋಷ ಪೂಜೆ ಪ್ರದೋಷ ಮಂಗಳಾರತಿ ಎಂದೇ ದಾಖಲೆಯಲ್ಲಿರುವ ಧಾರ್ಮಿಕ ಪ್ರಾಧಾನ್ಯತೆ ಪೂಜೆಗೆ ಇದೆ. ಇದು ಹಿಂದಿನಿಂದಲೂ ಇವತ್ತಿಗೂ ನಡೆದುಕೊಂಡು ಬಂದಿರುವಂತಹ ಆಚರಣೆ. ರಾಷ್ಟ್ರದ ಯೋಗಕ್ಷೇಮಕ್ಕೋಸ್ಕರ ಪೂಜೆ ಸಂದರ್ಭದಲ್ಲಿ ಪ್ರಾರ್ಥನೆ ನಡೆಯುತ್ತದೆ. ಪೂಜೆ ಸಂದರ್ಭ ಟಿಪ್ಪು ಭಾಗವಹಿಸಿದ್ದ ಎಂದು ಹೇಳಿಕೊಂಡು ಬಂದಿದ್ದಾರೆ. ಹಾಗಾಗಿ ಈ ಹೆಸರು ಬಂದಿರಬಹುದು ಎಂದು ತಿಳಿಸಿದ್ದಾರೆ.