ಬ್ರಹ್ಮಾವರ,ಡಿ 23 (MSP): ತೆಕ್ಕಟ್ಟೆಯಿಂದ ಸಾಲಿಗ್ರಾಮ ದೇವಸ್ಥಾನಕ್ಕೆ ಬೈಕ್ನಲ್ಲಿ ಹೊರಟಿದ್ದ ಭಾವಿ ಮದುಮಗ, ಕೋಟ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯಡಿ ಸಿಲುಕಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ಸುದ್ದಿ ಕೇಳಿದ ಸಂಬಂಧಿಯೂ ಹೃದಯಾಘಾತದಲ್ಲಿ ಮೃತಪಟ್ಟಿದ್ದಾರೆ.
ಕೋಟೇಶ್ವರ ಪೇಟೆಮನೆಯ ನಿವಾಸಿ ತೆಕ್ಕಟ್ಟೆಯಲ್ಲಿ ವಾಸಿವಾಗಿರುವ ವರುಣ್ (33)ಮೃತಪಟ್ಟಿರುವ ಯುವಕ. ವಿಷಯ ತಿಳಿಯುತ್ತಿದ್ದಂತೆ ಆತನ ಸಾಂಬಂಧಿ ಗಿರಿಜ(68) ಕೂಡಾ ಹೃದಯಾಘಾತದಲ್ಲಿ ಮೃತಪಟ್ಟಿದ್ದಾರೆ.
ಶನಿವಾರ ವರುಣ್ ಸಾಲಿಗ್ರಾಮ ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ಬೈಕ್ನಲ್ಲಿ ಹೋಗುತ್ತಿದ್ದಾಗ, ಕೋಟದ ಬೆಲ್ಲದ ಗಣಪತಿ ದೇವಸ್ಥಾನದ ಎದುರು ರೋಡ್ ರೋಲರ್ ಸಾಗುತ್ತಿದ್ದು, ಇದನ್ನು ಹಿಂದಿಕ್ಕಿ ಮುಂದೆ ಸಾಗುವಾಗ ರೋಡ್ ರೋಲರ್ ಬೈಕ್ಗೆ ತಾಗಿದ್ದು, ನಿಯಂತ್ರಣ ತಪ್ಪಿದ ಬೈಕ್ ರಸ್ತೆಗೆ ಬಿದ್ದಿದೆ. 12 ಚಕ್ರದ ಬೃಹತ್ ಲಾರಿ ಅವರ ಮೈಮೇಲೆ ಹಾಯ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದೇ 30 ರಂದು ಮದುವೆ ನಡೆಯಲಿದ್ದು, ಮದುವೆಯ ಪೂರ್ವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ವರುಣ್ ವಿದೇಶದಲ್ಲಿದ್ದು ಡಿ ೨೬ ಕ್ಕೆ ಊರಿಗೆ ಬರುವವರಿದ್ದರು. ಆದರೆ ವಿಧಿ ಬೇರೆಯೇ ಆಗಿತ್ತು, ವಿದೇಶದಲ್ಲಿ ಬೇಗನೆ ರಜೆ ಮಂಜೂರು ಆದ ಕಾರಣ ಮದುವೆ ತಯಾರಿಗಾಗಿ ಒಂದಷ್ಟು ದಿನದ ಮುಂಚೆಯೇ ಊರಿಗೆ ಬಂದಿದ್ದರು. ಘಟನೆ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.