ಮಂಗಳೂರು, ಮಾ 27 (DaijiworldNews/HR): ಸಿದ್ದರಾಮಯ್ಯನವರು ಎಲ್ಲಾ ಧರ್ಮದ ಗುರುಗಳಿಗೆ ಗೌರವ ಕೊಡ್ತಾ ಇದ್ದಾರೆ. ಆದರೆ ಬಿಜೆಪಿಯವರು ಅವರ ಹೇಳಿಕೆ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ. ಎಲ್ಲಾ ಸ್ವಾಮಿಗಳು ಸಿದ್ದರಾಮಯ್ಯನವರ ಜೊತೆ ಆತ್ಮೀಯತೆಯಿಂದ ಇದ್ದಾರೆ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾರಾದ್ರೂ ಸ್ವಾಮೀಜಿ ಪ್ರತಿಭಟನೆ ಮಾಡಿದ್ರಾ? ಮೂಢನಂಬಿಕೆ ಕಾಯ್ದೆ ಕೂಡ ಆವತ್ತು ಸ್ವಾಮೀಜಿಗಳ ಮನವಿ ಮೇರೆಗೆ ಸಿದ್ದರಾಮಯ್ಯ ಕೈ ಬಿಟ್ಟಿದ್ದರು. ಆದರೆ ಬಿಜೆಪಿ ಸರ್ಕಾರ ಯಾವುದಕ್ಕೂ ಬೆಲೆ ಕೊಡದೇ ಆ ಬಿಲ್ ಜಾರಿ ಮಾಡಿದ್ದು, ಬಿಜೆಪಿ ಸ್ವಾಮೀಜಿಯವರ ಬೇಡಿಕೆ ಮತ್ತು ಜನರ ಭಾವನೆ ಅರ್ಥ ಮಾಡಿಕೊಳ್ಳಲ್ಲ ಎಂದರು.
ಇನ್ನು ಸಿದ್ದರಾಮಯ್ಯ ಅವರು ದೇವಸ್ಥಾನದ ಅರ್ಚಕರ ಗೌರವಧನ ಹೆಚ್ಚಳ ಮಾಡಿದ್ದರು. ಆದರೆ ಬಿಜೆಪಿ ಈವರೆಗೆ ಆ ಕೆಲಸ ಮಾಡಲೇ ಇಲ್ಲ. ಅದನ್ನ ಬಿಟ್ಟು ಸುಮ್ಮನೇ ಜನರ ಮಧ್ಯೆ ಬಿಜೆಪಿ ಗೊಂದಲ ಸೃಷ್ಟಿಸಿ ದಿಕ್ಕು ತಪ್ಪಿಸೋ ಕೆಲಸ ಬಿಜೆಪಿ ಮಾಡ್ತಿದೆ ಎಂದಿದ್ದಾರೆ.
ಕೊಲ್ಲೂರು ದೇವಸ್ಥಾನದಲ್ಲಿ ಟಿಪ್ಪು ಸಲಾಂ ಆರತಿ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇತಿಹಾಸ ಪ್ರಸಿದ್ದ ದೇವಸ್ಥಾನದ ಪರಂಪರೆ ಬಗ್ಗೆ ಆಡಳಿತ ಮಂಡಳಿ ಇದೆ. ರಸ್ತೆ ಬದಿಯಲ್ಲಿ ನಿಂತವರು ಇದೆಲ್ಲಾ ಮಾತನಾಡಿದ್ರೆ ಆಗಲ್ಲ. ಧಾರ್ಮಿಕ ಪರಂಪರೆ ಅರಿತ ಸ್ವಾಮೀಜಿ, ಗುರುಗಳು ಇದ್ದಾರೆ. ಅದು ಬೇಕಾ ಬೇಡ್ವಾ ಎನ್ನುವುದು ಆಡಳಿತ ಮಂಡಳಿಗೆ ಬಿಟ್ಟ ವಿಚಾವಾಗಿದ್ದು, ಹೆಚ್ಚು ಕಡಿಮೆ ಇದ್ದರೆ ಅದನ್ನ ದೇವರು ನೋಡಿಕೊಳ್ತಾರೆ ಎಂದರು.
ನಾವು ಮನುಷ್ಯರು ಕೊಟ್ರೆ ಎಷ್ಟು ಕೊಡಬಹುದು, ದೇವರು ಕೊಟ್ಟರೆ ಸಹಿಸಲಾರದಷ್ಟು ಕೊಡ್ತಾರೆ. ಈ ಬಗ್ಗೆ ಆಡಳಿತ ಮತ್ತು ದೇವಸ್ಥಾನದ ಸಮಿತಿ ತೀರ್ಮಾನಿಸಲಿ. ಅದು ಬಿಟ್ಟು ಸಂಸ್ಕೃತಿ, ಇತಿಹಾಸದ ಬಗ್ಗೆ ಸುಮ್ಮನೆ ಮಾತನಾಡೋದು ಶೋಭೆ ತರುವಂಥದ್ದಲ್ಲ ಎಂದಿದ್ದಾರೆ.
ಪಠ್ಯ ಪುಸ್ತಕದಲ್ಲಿ ಟಿಪ್ಪು ವೈಭವೀಕರಣ ಕೈ ಬಿಡುವ ವಿಚಾರದ ಕುರಿತು ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಚರಿತ್ರೆ ಪಠ್ಯ ಪುಸ್ತಕ ಮಾತ್ರವಲ್ಲ, ವಿಶ್ವದ ಎಲ್ಲಾ ಮ್ಯೂಸಿಯಂನಲ್ಲಿ ಇದೆ. ಇಂಗ್ಲೆಂಡ್, ಫ್ರಾನ್ಸ್ ಎಲ್ಲಾ ಕಡೆ ಟಿಪ್ಪು ಇತಿಹಾಸ ಇದ್ದು, ಅದನ್ನ ಯಾರೂ ಬದಲಾವಣೆ ಮಾಡಲು ಆಗಲ್ಲ. ಟಿಪ್ಪು ಇತಿಹಾಸ ರಾಜ್ಯದಲ್ಲೂ ಅನೇಕ ಕಡೆ ಕಣ್ಣ ಮುಂದೆ ಕಾಣುತ್ತೆ. ಇದು ಸರ್ಕಾರದ ಮನೋಭಾವ ತಿಳಿಸುವ ಕೆಲಸ ಅಷ್ಟೇ. ಬಿಜೆಪಿ ಸರ್ಕಾರ ಮಕ್ಕಳಿಗಾಗಿ ಶಾಲೆ, ಕಾಲೇಜು ತೆರೆದಿಲ್ಲ. ಶಿಕ್ಷಕರ ಸಂಬಂಧಿಸಿದ ಯಾವುದೇ ಅಭಿವೃದ್ಧಿಯೂ ಈ ಸರ್ಕಾರ ಮಾಡಿಲ್ಲಎಂದು ವಾಗ್ದಾಳಿ ನಡೆಸಿದ್ದಾರೆ.