ಮಂಗಳೂರು, ಮಾ 27 (DaijiworldNews/HR): ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಬಳಸಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಕಳೆದ ತಿಂಗಳು ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು ಪೊಲೀಸ್ ತನಿಖೆ ಮುಂದುವರಿದಿದೆ.
ಈ ದಂಧೆಗೆ ಬಾಲಕಿಯರನ್ನು ಕರೆತರಲು ಮಹಿಳಾ ಪಿಂಪ್ಗಳು ಮಾಲ್, ಸಿನೆಮಾ ಥಿಯೇಟರ್, ಹೊಟೇಲ್, ಪಾರ್ಕ್ ಮೊದಲಾದೆಡೆ ಹಲವು ದಿನಗಳ ಕಾಲ ಹೊಂಚು ಹಾಕಿರುವುದು ತನಿಖೆ ವೇಳೆ ಗೊತ್ತಾಗಿದ್ದು, ಹೆಚ್ಚಾಗಿ ಬಡವರ್ಗದ ವಿದ್ಯಾರ್ಥಿನಿಯರನ್ನೇ ಗುರಿ ಮಾಡಿರುವುದು ತಿಳಿದುಬಂದಿದೆ.
ವಿದ್ಯಾರ್ಥಿನಿಯರನ್ನು ನಿರಂತರವಾಗಿ ಗಮನಿಸುತ್ತಾ ಅವರ ಬೇಕು, ಬೇಡಗಳ ಬಗ್ಗೆ ತಿಳಿದು ಬಲೆ ಬೀಸುತ್ತಾರೆ. ಮೊದಲಿಗೆ ಪರಿಚಯಸ್ಥರಂತೆ ವರ್ತಿಸಿ ಅದರಲ್ಲಿ ಯಶಸ್ವಿಯಾದರೆ ಮುಂದುವರಿಯುತ್ತಾರೆ. ಇಲ್ಲವಾದರೆ ಸಮಸ್ಯೆ ಇಲ್ಲವೇ ಸಹಾಯದ ಬಗ್ಗೆ ಮಾತು ಆರಂಭಿಸಿ ಆತ್ಮೀಯವಾಗಿ ಮಾತಿಗಿಳಿದು ಅವರ ಸಂಪರ್ಕ ಸಾಧಿಸುತ್ತಾರೆ.
ಇನ್ನು ಆ ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಹಣ, ಬಟ್ಟೆ ಇನ್ನಿತರ ಗಿಫ್ಟ್ ಅನ್ನು ಕೊಟ್ಟು ಮಾಲ್, ಹೊಟೇಲ್ಗಳಿಗೆ ಕರೆದೊಯ್ದು ಎಲ್ಲ ಬಿಲ್ಗಳನ್ನು ಪಾವತಿಸುತ್ತಾರೆ. ಐಷಾರಾಮಿ ಬದುಕಿನ ರುಚಿ ಹಿಡಿಸುತ್ತಾರೆ. ಆ ಬಳಿಕ ಹೀನ ಕೃತ್ಯ ಆರಂಭಿಸುತ್ತಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಈಗಾ ಗಲೇ 16 ಮಂದಿಯನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂಧಿತರಲ್ಲಿ ಮೂಡುಬಿದಿರೆ, ಉಳ್ಳಾಲ, ಕಾಸರ ಗೋಡಿನವರಿದ್ದು, ವಿವಿಧ ರಾಜಕೀಯ ಮುಖಂಡರ ಸಹವರ್ತಿಗಳು, ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿರುವವರು ಕೂಡ ಸೇರಿದ್ದಾರೆ ಎನ್ನಲಾಗಿದೆ.