ಬೆಳ್ತಂಗಡಿ, ಅ 20 : ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವ ರು ಶುಕ್ರವಾರ ಕಾನೂರಾಯಣ ಚಲನ ಚಿತ್ರಕ್ಕೆ ಚಾಲನೆ ನೀಡಿದರು. ಮಹಿಳೆಯರ ಪರಿವರ್ತನೆಯಿಂದ ಗ್ರಾಮ ಪರಿವರ್ತನೆ ಹಾಗೂ ದೇಶದ ಪರಿವರ್ತನೆ ಸಾಧ್ಯವಾಗುತ್ತದೆ. ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ರೂಪಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಗೊಂಡಿದ್ದು ಗಾಮೀಣ ಮಹಿಳೆಯರ ಸಬಲೀಕರಣದಿಂದ ಯೋಜನೆಯು ಇಂದು ಇಡೀ ವಿಶ್ವದ ಗಮನ ಸೆಳೆದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಧರ್ಮಸ್ಥಳದಲ್ಲಿ ಶುಕ್ರವಾರ ಗ್ರಾಮಾಭಿವೃದ್ಧಿ ಯೋಜನೆಯ ಯಶೋಗಾಥೆ, ಸಮಸ್ಯೆಗಳು ಮತ್ತು ಸವಾಲುಗಳನ್ನು ಪ್ರತಿಬಿಂಬಿಸುವ ಕಾನೂರಾಯಣ ಚಲನ ಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಚಲನ ಚಿತ್ರವು ನಗರ ಪ್ರದೇಶದ ಜನರಿಗೂ ಗ್ರಾಮೀಣ ಬದುಕಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಕೃಷಿಯ ಮಹತ್ವವನ್ನು ತಿಳಿಸಿ ಅವರೂ ಕೂಡ ಗ್ರಾಮೀಣ ಪ್ರದೇಶಕ್ಕೆ ಬಂದು ಕೃಷಿಯನ್ನು ಅವಲಂಬಿಸುಂತೆ ಪ್ರೇರಣೆ ನೀಡಲಿ ಎಂದು ಹಾರೈಸಿದರು.ಕುಟುಂಬದ ಸದಸ್ಯರೊಂದಿಗೆ ನೋಡಬಹುದಾದ ಉತ್ತಮ ಚಲನಚಿತ್ರ ಇದಾಗಿದ್ದು ಇದಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಲಿ ಎಂದು ಆಶಿಸಿದರು. ಚಲನಚಿತ್ರದ ಮೂಲಕ ಜನರ ಬದುಕಿಗೆ ಹೊಸ ಬೆಳಕನ್ನು ನೀಡಲಿ ಎಂದು ಹೆಗ್ಗಡೆಯವರು ಹೇಳಿದರು. ಖ್ಯಾತ ಚಲನಚಿತ್ರ ನಿರ್ದೇಶಕ ಟಿ. ಎಸ್. ನಾಗಭರಣ ನೇತೃತ್ವದಲ್ಲಿ ಚಲನಚಿತ್ರವು ಮನೋಜ್ಞವಾಗಿ ಮೂಡಿ ಬಂದಿದ್ದು ಗ್ರಾಮೀಣ ಪರಿವರ್ತನೆಯ ಸೊಗಡನ್ನು ಪ್ರತಿಬಿಂಬಿಸುತ್ತದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.ಧರ್ಮಸ್ಥಳದಲ್ಲಿ ಚತ್ರೀಕರಣ ಕಾರ್ಯ ಪ್ರಾರಂಭಿಸಲಾಯಿತು. ಮುಂದೆ 50 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯ ಬೆಳವಡಿ ಗ್ರಾಮದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಟಿ. ಎಸ್. ನಾಗಾಭರಣ ತಿಳಿಸಿದರು.