ಕಡಬ, ಡಿ 22(MSP): ಆಲಂಕಾರು ಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ಚಿತ್ರ ನಟ ಹುಚ್ಚ ವೆಂಕಟ್ ಪ್ರತ್ಯಕ್ಷವಾಗಿ ಜನರಿಗೆ ಪುಕ್ಕಟೆ ಮನೋರಂಜನೆ ನೀಡಿದ್ದಾರೆ. ಗುರುವಾರ ಮಡಿಕೇರಿಯಲ್ಲಿ ದಿನಪೂರ್ತಿ ಶೂಟಿಂಗ್ ನಿರತರಾಗಿದ್ದ ಹುಚ್ಚ ವೆಂಕಟ್, ಶುಕ್ರವಾರ ಬೆಳಗ್ಗೆ ಮಂಗಳೂರು ರಸ್ತೆಯಾಗಿ ಉಡುಪಿಗೆ ಹೊರಟಿದ್ದರು. ಮುಂಜಾನೆ ಏಳು ಗಂಟೆಯ ಸುಮಾರಿಗೆ ಕಾರು ಡ್ರೈವ್ ಮಾಡಿಕೊಂಡು ಆಲಂಕಾರಿಗೆ ಬಂದು ಕಾರಿನಿಂದ ಇಳಿದು ಕೈಗಳೆರಡನ್ನು ಬೆನ್ನಹಿಂದೆ ಕಟ್ಟಿಕೊಂಡು ಜೋರಾಗಿ ಹಾಡು ಹೇಳುತ್ತ, ತನ್ನಷ್ಟಕ್ಕೆ ತಾನು ಮಾತನಾಡುತ್ತ, ನಗುತ್ತ ರಸ್ತೆಯ ಉದ್ದಗಲಕ್ಕೂ ನಡೆದಾಡಿದರು.
ಕೊನೆಗೆ ಅಲ್ಲೇ ಇದ್ದ ಹೂವಿನ ಅಂಗಡಿಗೆ ಹೋಗಿ ನಾಲ್ಕು ಗುಲಾಬಿ ಹೂ ಖರೀದಿಸಿದರು. ಈ ಸಂದರ್ಭ ಬೆಳಗ್ಗೆ ಪೇಟೆಯಲ್ಲಿ ಇದ್ದ ಬೆರಳೆಣಿಕೆಯ ಜನರು ಮಾತ್ರ ಹುಚ್ಚಾವೆಂಕಟ್ ಅವರನ್ನುಕುತೂಹಲದಿಂದ ಗಮನಿಸಿತೊಡಗಿದರು .ಅಷ್ಟರಲ್ಲಿ ಹೊಟೇಲ್ಗೆ ಹೋಗಿ ಎಡಗೈಯಲ್ಲಿ ಉಪಹಾರ ಸೇವಿಸಲು ಪ್ರಾಂಭಿಸಿದರು. ಇದನ್ನು ಕಂಡ ಜನರು " ಉಂದು ಹುಚ್ಚ ವೆಂಕಟ್ ಅಥಾ? ' ಎಂದು ತುಳುವಿನಲ್ಲಿ ತಮ್ಮೊಳಗೆ ಮಾತನಾಡಿಕೊಂಡರು. ಆಗ "ಹೌದು ನಾನೇ ವೆಂಕಟ್, ಎಂಚ ಉಲ್ಲಾರ್' ಎಂದು ಜನರನ್ನು ಪ್ರಶ್ನಿಸಿದರು. ಬಳಿಕ ಅಭಿಮಾನಿಗಳು ಹಲವರು ಸೆಲ್ಫಿಗೆ ಪ್ರಯತ್ನಿಸಿದರಾದರೂ ವೆಂಕಟ್ ಸೆಲ್ಫಿಗೆ ನಿರಾಕರಿಸಿ ಕೆಲವರಿಗೆ ಮಾತ್ರ ಪೋಸ್ ನೀಡಿದರು. ಇನ್ನು ಹೊರಗಡೆ ಅಭಿಮಾನಿಗಳು ಸೇರುವುದನ್ನು ಗಮನಿಸಿದ ವೆಂಕಟ್ ಅವಸರ ಅವಸರವಾಗಿ ಚಹಾ ಕುಡಿದು ಬಿಲ್ ಪಾವತಿಸಿ ಕೈಯನ್ನೂ ತೊಳೆಯದೆ ಅಭಿಮಾನಿಗಳಿಂದ ತಪ್ಪಿಸಿಕೊಂಡು ಸುಮಾರು 300 ಮೀ. ದೂರದಲ್ಲಿದ್ದ ತನ್ನ ಕಾರಿನ ಬಳಿಗೆ ಓಡಿದರು. ಜನರು ಹಿಂಬಾಲಿಸಿ ಬಂದೂ ಎಷ್ಟು ಬಾರಿ ವೆಂಕಟ್ ಅವರನ್ನು ಕರೆದರೂ ಹಿಂತಿರುಗಿ ನೋಡದೆ ಕಾರು ಚಲಾಯಿಸಿಕೊಂಡು ಪ್ರಯಾಣ ಮುಂದುವರಿಸಿದರು.